Tuesday, June 8, 2010

ಸಮಗ್ರ ನಾಗರೀಕ ಸೇವೆಗೆ ಮಂಗಳೂರು ಒನ್ ಸಜ್ಜು

ಮಂಗಳೂರು,ಜೂ.8:ಜನರ ಅಗತ್ಯಗಳಿಗೆ ಸೂಕ್ತವಾಗಿ,ವೇಗವಾಗಿ ಹಾಗೂ ಸಮಗ್ರವಾಗಿ ಸ್ಪಂದಿಸಲು ಮಂಗಳೂರು ಒನ್ ಸೇವಾ ಕೇಂದ್ರವನ್ನು ನಾಳೆ ನಗರಾಭಿವೃದ್ಧಿ ಸಚಿವರು ವಿದ್ಯುಕ್ತ ಚಾಲನೆ ನೀಡುವರು.

ವಿದ್ಯುತ್ ಬಿಲ್ ಪಾವತಿ, ಮೊಬೈಲ್ ಬಿಲ್ ಪಾವತಿ, ಪಾಸ್ ಪೋರ್ಟ್ ಅರ್ಜಿಗಳನ್ನು ಪ್ರಥಮ ಹಂತದಲ್ಲಿ ಸೇವಾ ಕೇಂದ್ರದಲ್ಲಿ ನೀಡಲು ಯೋಜಿಸಲಾಗಿದ್ದು, ಉಳಿದ ಜನಸ್ನೇಹಿ ಸೇವೆಗಳಾದ ನೀರು,ಆಸ್ತಿ ತೆರಿಗೆ, ಜೀವ ವಿಮಾ ಪ್ರೀಮಿಯಂ ಪಾವತಿ,ಜನನ/ಮರಣ ಪ್ರಮಾಣ ಪತ್ರ, ಬಸ್ ಪಾಸ್ ನವೀಕರಣ, ರೈಲ್ವೇ ಟಿಕೆಟ್, ಕುಂದು ಕೊರತೆ ನೋಂದಣಿ, ವಿಮಾನ ಟಿಕೆಟ್ ಕಾಯ್ದಿರಿಸುವಿಕೆ, ಬ್ಯಾಕಿಂಗ್ ಸೇವೆಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಮನಾಪ ಆಯುಕ್ತ ಡಾ. ವಿಜಯಪ್ರಕಾಶ್ ತಿಳಿಸಿದ್ದಾರೆ.ಮಂಗಳೂರು ಮಹಾ ನಗರ ಪಾಲಿಕೆ ಕೇಂದ್ರ ಕಟ್ಟಡ, ಕದ್ರಿ ಮಲ್ಲಿಕಟ್ಟೆಯಲ್ಲಿರುವ ಪಾಲಿಕೆಯ ವಾಣಿಜ್ಯ ಸಂಕೀರ್ಣ,ಜ್ಯೊತಿ ವೃತ್ತ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಈ ಸೇವೆ ಆರಂಭ ವಾಗಲಿದೆ.ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನೂತನ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದು, ವಿವಿಧ ಸರ್ಕಾರಿ,ಖಾಸಗಿ ಕಂಪೆನಿಗಳ ಸೇವೆ ಒಂದೇ ಸೂರಿನಡಿ ಮಂಗಳೂರಿನ ಜನರಿಗೆ ಲಭ್ಯವಾಗಲಿದೆ. ನಾಗರೀಕರ ಅನುಕೂಲಕ್ಕೆ ಮಂಗಳೂರು ಒನ್ ಸಜ್ಜಾಗಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕರ್ತವ್ಯ ನಿರ್ವಹಿಸಲಿದೆ. ಇ- ಆಡಳಿತ ಇಲಾಖೆ ಸಿಬ್ಬಂದಿಗಳು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವರು.