Monday, June 21, 2010

ತುಂಬೆ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಜಾಗದ ಸರ್ವೆ

ಮಂಗಳೂರು ಜೂನ್ 21: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿಗೆ ಸಂಬಂಧಿಸಿದಂತೆ ,ವೆಂಟೆಡ್ ಡ್ಯಾಂನ್ನು ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನಿನ ಬಗ್ಗೆ ಸರ್ವೆ ಕಾರ್ಯ ನಡೆಸಿ ವರದಿ ಸಲ್ಲಿಸಲು ಬೆಂಗಳೂರಿನ ಸ್ಟುಪ್ ಕನ್ಸಲ್ಟೆಂಟ್ಸ್ ಇವರಿಗೆ ವಹಿಸಿಕೊಡಲಾಗಿದ್ದು ,ಈ ಸರ್ವೆ ವರದಿಯನ್ನು ಕೂಡಲೇ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ತಿಳಿಸಿದರು.
ಅವರು ಇಂದು ದಿನಾಂಕ 21-6-10 ರಂದು ಪೂರ್ವಾಹ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪದಿಂದ ಹಾನಿಯಾದ ಕೃಷಿಗೆ ನೀಡಲಾಗುವ ಪರಿಹಾರದ ಮೊತ್ತವು ಅತ್ಯಲ್ಪವಾಗಿದ್ದು,ಹೆಚ್ಚು ಪರಿಹಾರ ಧನ ನೀಡುವಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸ ಲಾಗಿದೆಯೆಂದರು .ನಗರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ಸುಗಳಿಗೆ ಪರವಾನಿಗೆ ನೀಡಿದ್ದರೂ ಬಸ್ಸುಗಳು ಓಡಾಡದೇ ಇರುವುದರಿಂದ ,ಈ ರಸ್ತೆಗಳಿಗೆ ಕೆಎಸ್ಆರ್ಟಿಸಿ ಬಸ್ಸುಗಳನ್ನು ಓಡಿಸಬಹುದಾಗಿದೆ. ಬೆಂದೂರುವೆಲ್ನಲ್ಲಿ ಕೆಎಸ್ಆರ್ಟಿಸಿ ವಶದಲ್ಲಿರುವ ಜಮೀನನ್ನು ಖಾಸಗಿ ಕಂಪೆನಿಗಳಿಗೆ ನೀಡದಂತೆ ಸೂಚಿಸಿದರು.
ಜನಸ್ಪಂದನ ಸಭೆಗಳಲ್ಲಿ ಅಂಗವಿಕಲರಿಗೆ ಆಗುವ ತೊಂದರೆಯನ್ನು ತಪ್ಪಿಸಲು 10 ದಿನ ಮುಂಚಿತವಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಅವರ ಅರ್ಜಿಗಳನ್ನು ಪಡೆದು, ಜನಸ್ಪಂದನಾ ಸಭೆಗಳಲ್ಲಿ ವಿಲೇ ಮಾಡುವಂತೆ ಸೂಚಿಸಿದರು. ಹತ್ತಿರದ ಕೇರಳ ರಾಜ್ಯಕ್ಕೆ ಸಾಗಾಟ ವಾಗುತ್ತಿರುವ ಮರಳನ್ನು ಕೂಡಲೇ ನಿಲ್ಲಿಸುವಂತೆ ಮತ್ತು ಸ್ಥಳೀಯರಿಗೆ ಮನೆ ಕಟ್ಟಲು ಮರಳು ದೊರೆಯುವಂತಾಗಬೇಕೆಂಬ ಬಂಟ್ವಾಳ ಶಾಸಕರ ಕೋರಿಕೆಗೆ, ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣ ಮಾಡಿ,ಪಂಪ್ ಅಳವಡಿಸುವ ಬಗ್ಗೆ,ಪರಿಶಿಷ್ಟ ಜಾತಿ/ಪಂಗಡದವರ ಅರ್ಜಿಗಳನ್ನು ಬ್ಯಾಂಕಿಗೆ ಕಳುಹಿಸುವ ಬಗ್ಗೆ,ಹಿಂದುಳಿದ ವರ್ಗದವರ ಅರ್ಜಿಗಳನ್ನು ವಿಲೇ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಂಗಳೂರು ಶಾಸಕರಾದ ಯು.ಟಿ .ಖಾದರ್. ಬಂಟ್ವಾಳ ಶಾಸಕರಾದ ರಮಾನಾಥ ರೈ,ಮೂಡಬಿದ್ರೆ ಶಾಸಕರಾದ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಪೊನ್ನುರಾಜ್, ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ, ಸಿಇಒ ಪಿ. ಶಿವಶಂಕರ್, ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಹಾಗೂ ಕೆಡಿಪಿ ಅನುಷ್ಠಾನ ಪರಿಶೀಲನಾ ಸಮಿತಿಗೆ ನಾಮ ನಿರ್ದೇಶನ ಗೊಂಡಿರುವ ಕಸ್ತೂರಿ ಪಂಜ,ಸತೀಶ ಕುಂಪಲ, ರತ್ನಾಕರ ಜೈನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.