Monday, June 4, 2012

'ತಿಳುವಳಿಕೆಯಿಂದ ಭಯಮುಕ್ತ ವಾತಾವರಣ'


ಮಂಗಳೂರು,ಜೂನ್.04 : ತಿಳುವಳಿಕೆಯಿಂದ ಭಯಮುಕ್ತ ವಾತಾವರಣ ನಿರ್ಮಾಣ ಸಾಧ್ಯ; ಕಾನೂನಿನ ಬಗ್ಗೆ ತಿಳುವಳಿಕೆಯಿಲ್ಲದಿದ್ದರೆ ಸ್ವಯಂ ರಕ್ಷಣೆ ಸಾಧ್ಯವಿಲ್ಲ ಎಂದು ನ್ಯಾಯವಾದಿಗಳಾದ ಶ್ರೀಮತಿ ಗೌರಿ ಕೆ ಎಸ್ ಅವರ ಹೇಳಿದರು.
ಇಂದು ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದಿಂದ ನೀರು ಮಾರ್ಗದ ಭಜನಾಮಂದಿರ ಸಭಾಭವನ ಸಂಯೋಜಿಸಲಾದ 'ಬಾಲ್ಯ ವಿವಾಹ ಮತ್ತು ಬಾಲನ್ಯಾಯ ಕಾಯಿದೆ' ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಕಾನೂನು ನೆರವು ಪಡೆದುಕೊಳ್ಳುವ ಬಗ್ಗೆ, ಬಾಲ್ಯ ವಿವಾಹದಿಂದಾಗುವ ತೊಂದರೆಗಳ ಬಗ್ಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯದ ಬಗ್ಗೆ ಅವರು ವಿವರಿಸಿದರು. ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದ ಅವರು ಉತ್ತಮ ಮಕ್ಕಳಿಂದ ಉತ್ತಮ ಸಮಾಜ ಸೃಷ್ಟಿ ಸಾಧ್ಯ ಎಂದರು. ಕೌಟುಂಬಿಕ ದೌರ್ಜನ್ಯದ ವಿವಿಧ ಮುಖಗಳು ಹಾಗೂ ಈ ಸಂಬಂಧ ಕಾನೂನಿನ ನೆರವು ಪಡೆಯುವ ಬಗ್ಗೆಯೂ ಅವರು ವಿವರಿಸಿದರು. ಮದುವೆ ನೋಂದಣಿಯಿಂದಾಗುವ ಅನುಕೂಲಗಳನ್ನು ಮಹಿಳೆಯರಿಗೆ ವಿವರಿಸಿದರು. ಅನ್ಯಾಯಕ್ಕೊಳಗಾದವರು ನಿರ್ಭೀತಿಯಿಂದ ಪೊಲೀಸ್ ಠಾಣೆಗಳಿಗೆ, ನ್ಯಾಯಾಲಯಗಳನ್ನು ತಲುಪಬೇಕು. ಮಾಹಿತಿಯಿಂದ ಮಾತ್ರ ಇಂತಹ ಶಕ್ತಿ ಬರಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ವಾರ್ತಾಧಿಕಾರಿ ರೋಹಿಣಿ ಉದ್ಘಾಟಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯತ್ ಸದಸ್ಯ ಸುನಿಲ್ ಉಪಸ್ಥಿತರಿದ್ದರು. ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಶೋಭ ಮತ್ತು ಮೆಹರುನ್ನಿಸಾ ವೇದಿಕೆಯಲ್ಲಿದ್ದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು.