Sunday, June 17, 2012

ಕರಾವಳಿಗೆ 387 ಕಿ.ಮೀ. ಪರ್ಯಾಯ ರಸ್ತೆ:ಬಿ.ನಾಗರಾಜ ಶೆಟ್ಟಿ

ಮಂಗಳೂರು,ಜೂನ್.17: ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿಮಾಜಾಳಿವರೆಗೆ ಒಟ್ಟು 387 ಕಿ.ಮೀ. ಉದ್ದದ ಮೀನುಗಾರಿಕಾ ರಸ್ತೆ ನಿರ್ಮಾಣದ ಶಕ್ಯತಾ ವರದಿ ಶನಿವಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವುದಾಗಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ಮಿಲೇನಿಯಂ ಗ್ಲೋಬಲ್ ಸರ್ವೇಯರ್ ಮತ್ತು ಬೆಂಗಳೂರಿನ ಕನ್ಸೋರ್ಟಿಯಂ ಸಂಸ್ಥೆಗಳು ಶಕ್ಯತಾ ವರದಿಯನ್ನು ಸಿದ್ದ ಪಡಿಸಿವೆ. ಹತ್ತು ಸಂಪುಟಗಳ ವರದಿಯನ್ನು ಪ್ರಾಧಿಕಾರ ಶೀಘ್ರ ಸರಕಾರಕ್ಕೆ ಸಲ್ಲಿಸಲಿದೆ. ಶಕ್ಯತಾ ವರದಿಯಂತೆ ಪ್ರಸ್ತಾವಿತ ಯೋಜನೆಗೆ ರೂ.780 ಕೋಟಿ ವೆಚ್ಚವಾಗಲಿದೆ ಎಂದು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವಿವರಿಸಿದರು.ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಚರ್ಚೆಗಳು ನಡೆದು ಯೋಜನೆಗೆ ಅಂತಿಮ ರೂಪು ನೀಡಲಾಗಿದೆ ಎಂದರು.
ಅತ್ರಾಡಿ ರಾಜ್ಯ ಹೆದ್ದಾರಿಯನ್ನು ಮಣಿಪಾಲದಿಂದ ಬಜ್ಪೆಯವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿ ಪಡಿಸುವ ಸಾಧ್ಯತಾ ವರದಿ ಈಗಾಗಲೇ ಸರಕಾರಕ್ಕೆ ಸಲ್ಲಿಕೆಯಾಗಿದೆ. ರೂ.580 ಕೋಟಿಗಳ ಈ ಯೋಜನೆಯನ್ನು ರೂ.300 ಕೋಟಿಗಳಿಗೆ ಅನುಷ್ಠಾನ ಮಾಡಲು ಸರಕಾರ ತಾತ್ವಿಕವಾಗಿ ಒಪ್ಪಿದೆ. ಇದೇ ಜೂ.12ರಂದು ಮುಖ್ಯಮಂತ್ರಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ (ಎನ್ಎಫ್ ಪಿ ಬಿ) ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ರೂ.11 ಕೋಟಿ ವೆಚ್ಚದಲ್ಲಿ ಹತ್ತು ಮಹಿಳಾ ಮೀನು ಮಾರುಕಟ್ಟೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸೇರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಒಟ್ಟು ಅನುದಾನದ ಶೇ.90 ಭಾಗ ಕೇಂದ್ರ ಸರಕಾರದ್ದಾಗಿರುತ್ತದೆ. ಶೇ.10 ರಾಜ್ಯ ಸರಕಾರದ ಪಾಲಾಗಿರುತ್ತದೆ ಎಂದು ನಾಗರಾಜ ಶೆಟ್ಟಿ ವಿವರಿಸಿದರು.
ಪಡುಬಿದ್ರೆಯಲ್ಲಿ ನಿರ್ಮಾಣದ ಹಂತದಲ್ಲಿರುವ 80 ಲಕ್ಷ ರೂ. ಅಂದಾಜು ವೆಚ್ಚದ ಮೊದಲ ಮಹಿಳಾ ಮೀನು ಮಾರುಕಟ್ಟೆ ಆಗಸ್ಟ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಏಳು ಮಾರುಕಟ್ಟೆಗಳನ್ನು ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ. ಪ್ರಸ್ತುತ ಸಾಲಿನಲ್ಲಿ ಮತ್ತೆರಡು ಮಹಿಳಾ ಮೀನು ಮಾರುಕಟ್ಟೆಗಳನ್ನು ನಿಮರ್ಿಸಲಾಗುವುದು ಎಂದು ಶೆಟ್ಟಿ ಹೇಳಿದರು.
ಮಂಗಳಾ ಕಾರ್ನಿಷ್: ಮಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಂಗಳಾ ಕಾರ್ನಿಷ್ ವರ್ತುಲ ರಸ್ತೆಗಾಗಿ ಭೂಮಾಪನ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸೋಮವಾರದಿಂದ (ಜೂ.18)ಸಮೀಕ್ಷೆ ಆರಂಭಿಸಲಿವೆ. ಯೋಜನೆಯ ಶಕ್ಯತಾ ವರದಿಗಾಗಿ ಮೂಡಾದಿಂದ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ ಶೆಟ್ಟಿಯವರು ಮೂರು ಜಿಲ್ಲೆಗಳಲ್ಲಿ ಕಾಲು ಸಂಕಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದ ನಾಗರಾಜ ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದ ಅಭಿವೃದ್ಧಿಗೂ ಪ್ರಾಧಿಕಾರ ಆಸಕ್ತಿ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸಭಾಧ್ಯಕ್ಷರಾದ ಎನ್. ಯೋಗೀಶ್ ಭಟ್, ಪ್ರಾಧಿಕಾರದ ಸದಸ್ಯ ರವೀಂದ್ರನಾಥ್ ಹೆಗ್ಡೆ ಮತ್ತು ಕಾರ್ಯದರ್ಶಿ ಕೆ. ಪ್ರಭಾಕರ ರಾವ್ ಉಪಸ್ಥಿತರಿದ್ದರು.