Friday, June 15, 2012

ಶಿಶುಗಳ ಸಂರಕ್ಷಣೆಗೆ "ಬಾಲ ಸಂಜೀವಿನಿ''

ಮಂಗಳೂರು,ಜೂನ್. 15:ಕರ್ನಾಟಕ ಸರ್ಕಾರ 'ಎಲ್ಲರಿಗೂ ಆರೋಗ್ಯ'ಎಂಬ ಧ್ಯೇಯವನ್ನು ಹೊಂದಿ ರಾಜ್ಯದ ಎಲ್ಲಾ ಜನ ಬಡವ ಬಲ್ಲಿದರೆಲ್ಲರೂ ಆರೋಗ್ಯ ಪೂರ್ಣರಾಗಿರುವಂತೆ ಅನೇಕ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಸುವರ್ಣ ಆರೋಗ್ಯ ಅಭಿಯಾನ,ಗರ್ಭಿಣಿಯರ ರಕ್ಷಣೆಗೆ ಸುವರ್ಣ ಆರೋಗ್ಯ ಅಭಿಯಾನ,ಗರ್ಭಿಣಿಯರ ಆರೋಗ್ಯ ರಕ್ಷಣೆಗೆ ಜನನಿ ಸುರಕ್ಷಾ ಯೋಜನೆ, ಆಗ ತಾನೆ ಜನಿಸಿದ ಮಗುವಿನಿಂದ 06 ವರ್ಷದೊಳಗಿನ ಶಿಶುಗಳ ಆರೋಗ್ಯ ರಕ್ಷಣೆಗೆ ``ಬಾಲ ಸಂಜೀವಿನಿ'' ಹೀಗೆ ಹತ್ತು ಹಲವು ಆರೋಗ್ಯ ರಕ್ಷಣಾ ಯೋಜನೆಗಳು ಅನುಷ್ಠಾನವಾಗುತ್ತಿವೆ.
ಬಾಲ ಸಂಜೀವಿನಿ ಯೋಜನೆ: ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ 06 ವರ್ಷದೊಳಗಿನ ಮಕ್ಕಳಿಗೆ ರಾಜ್ಯದ ಆಯ್ದ 5 ಆಸ್ಪತ್ರೆಗಳಲ್ಲಿ 3 ನೇ ಹಂತದ ಚಿಕಿತ್ಸೆಯನ್ನು ಈ ಯೋಜನೆಯಡಿ ಒದಗಿಸಲಾಗುವುದು. 3ನೇ ಹಂತ ಚಿಕಿತ್ಸೆ ಆವಶ್ಯವಿರುವ ಮಕ್ಕಳಿಗೆ ಗರಿಷ್ಠ 35,000/- ಹಾಗೂ ನವಜಾತ ಶಿಶುಗಳ ಆರೈಕೆಗೆ ಮತ್ತು ಚಿಕಿತ್ಸೆಗೆ ಗರಿಷ್ಠ ರೂ.50,000/- ಗಳನ್ನು ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ವೆಚ್ಚ ಭರಿಸಲಿದೆ.
ಉದ್ದೇಶ:ಕಡುಬಡತನದ 3ನೇ ಹಂತದ ತುರ್ತು ಚಿಕಿತ್ಸೆ ಒದಗಿಸುವುದು,ಮಕ್ಕಳ ಆರೋಗ್ಯ ರಕ್ಷಣೆ,ಮಕ್ಕಳ ತಾಯಂದಿರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಮಗುವಿನ ಆರೈಕೆಯಲ್ಲಿ ಸಬಲರನ್ನಾಗಿಸುವುದು,ಆರೋಗ್ಯ ಸೇವೆಗಳ ಮೂಲಕ ಹಾಗೂ ಉತ್ತಮ ಪೌಷ್ಠಿಕ ಆಹಾರವನ್ನು ಒದಗಿಸುವುದರ ಮೂಲಕ ಸಶಕ್ತರನ್ನಾಗಿಸುವುದು.
ಸೌಲಭ್ಯ ಪಡೆಯಲು ಅರ್ಹತೆ: 3ನೇ ಹಂತದ ತುರ್ತು ಚಿಕಿತ್ಸೆ ಆವಶ್ಯವಿರುವ ನ್ಯೂನತೆಗೆ ಒಳಗಾಗಿರುವ ಮಕ್ಕಳು,ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿರುವ 6 ವರ್ಷದೊಳಗಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಕಾರ್ಯಕ್ರಮದ ಅನುಷ್ಠಾನ:- ಪ್ರಾಥಮಿಕ ಆರೋಗ್ಯ ಕೇಂದ್ರ ಸಾರ್ವಜನಿಕ ಆಸ್ಪತ್ರೆಗಳ ಮೂಲಕ ನೀಡುವ ಚಿಕಿತ್ಸೆಯಲ್ಲಿ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಾರದಿದ್ದಲ್ಲಿ ಸಂಬಂಧಿಸಿದ ವೈದ್ಯಾಧಿಕಾರಿಗಳು 3ನೇ ಹಂತದ ಚಿಕಿತ್ಸೆಗಾಗಿ ಶಿಶು/ಮಕ್ಕಳನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ಶಿಫಾರಸು ಮಾಡುವರು. ಚಿಕಿತ್ಸೆ ಅಗತ್ಯವಿರುವ ಮಕ್ಕಳನ್ನು ಗುರುತಿಸುವುದು ಹಾಗೂ ಶಿಫಾರಸು ಮಾಡುವುದು(ಮಾಹಿತಿ ಸೇವೆ ಪತ್ರದೊಂದಿಗೆ) ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆ,ಮೇಲ್ವಿಚಾರಕಿ/ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ.
ಪ್ರಾರಂಭಿಕವಾಗಿ ರಾಜ್ಯದಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ,ಬೆಳಗಾವಿಯ ಡಾ.ಪ್ರಭಾಕರ ಕೋರೆ ಉಚಿತ ಆಸ್ಪತ್ರೆ,ಗುಲ್ಬರ್ಗಾದ ಎಂ.ಆರ್.ಮೆಡಿಕಲ್ ಕಾಲೇಜು-ಬಸವೇಶ್ವರ ಮತ್ತು ಸಂಗಮೇಶ್ವರ ಆಸ್ಪತ್ರೆ,ಮಂಗಳೂರಿನ ಲೇಡಿಗೋಷನ್ ಮತ್ತು ವೆನ್ಲಾಕ್ ಆಸ್ಪತ್ರೆ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ವಿಶೇಷ ಸಂದರ್ಭಗಳಲ್ಲಿ ಯಾವುದೇ ಜಿಲ್ಲೆಯ ಮಗುವಿಗೆ ಮೇಲ್ಕಂಡ 5 ಘಟಕಗಳ ಪೈಕಿ ಯಾವುದೇ ಘಟಕಗಳಲ್ಲಿ ಚಿಕಿತ್ಸೆ ನೀಡಬಹುದಾಗಿರುತ್ತದೆ.
ಚಿಕಿತ್ಸೆಗೆ ಗುರುತಿಸಿರುವ ಆರೋಗ್ಯ ಸಮಸ್ಯೆಗಳು: ತೀವ್ರತರನಿಮೋನಿಯಾ 2)ಎನ್ಸೆಫಿಲೈಟೀಸ್ಮೆನೆಂಜೈಟೀಸ್ 3)ಕ್ಲಿಷ್ಠಕರಮಲೇರಿಯಾ 4)ಅನಿಮಿಯಾ(ರಕ್ತಹೀನತೆ) 5)ಡಯಾಬಿಟೀಸ್(ಮಧುಮೇಹ) 6)ಯುರಿನಲ್ ಸಮಸ್ಯೆಗಳು -ಮೂತ್ರಕೋಶ/ಕಿಡ್ನಿಸಮಸ್ಯೆ 7)ನವಜಾತ ಶಿಶುವಿನ ಲೆವೆಲ್ -3 ಚಿಕಿತ್ಸೆ 8)ಲಿವರ್ ತೊಂದರೆ 9)ನ್ಯೂರೋಲಾಜಿಕಲ್ ಡಿಸಾರ್ಡರ್ಸ್ 10)ಸೆಕೆಂಡರಿ ಮಾಲ್ ನ್ಯೂಟ್ರಿಷನ್ 11) ಕ್ಲಿಷ್ಟ ಅತಿಸಾರ 12) ಮಗುವಿನ ಶಸ್ತ್ರ ಚಿಕಿತ್ಸೆ 13) ವಿಷಜಂತು ಕಡಿತಕ್ಕೆ ಚಿಕಿತ್ಸೆ 14) ವಿಷ ಸೇವನೆ 15)ಹೃದಯ ಸಂಬಂಧಿರೋಗಗಳು(ಶಸ್ತ್ರಚಿಕಿತ್ಸೆ ಹೊರತುಪಡಿಸಿ)16)ತೀವ್ರ ಸೋಂಕುರೋಗಗಳು 17)ರಕ್ತ ಸಂಬಂಧರೋಗಗಳು ಹಾಗೂ 18)ಅಪಘಾತ ಚಿಕಿತ್ಸೆ
ಪಡೆಯಬಹುದಾದ ಸೌಲಭ್ಯಗಳು:ತಜ್ಞ ವೈದ್ಯರಸಲಹೆಯಂತೆಚಿಕಿತ್ಸೆಒದಗಿಸಲಾಗುವುದು,ಒಳರೋಗಿಯಾಗಿ ದಾಖಲಾದ ಸಂದಭ್ದಲ್ಲಿ ಮಗುವಿನೊಡನೆ ತಂಗಲು ಒಬ್ಬರಿಗೆ (ತಾಯಿ/ಪೋಷಕರಿಗೆ)ಅವಕಾಶವಿದೆ.ಪ್ರತೀದಿನ ರೂ.100/-ರಂತೆ ಭತ್ಯೆ ಹಾಗೂ ವಾಸ್ತವಿಕ ಪ್ರಯಾಣ ವೆಚ್ಚ ತಾಯಿ/ಪೋಷಕರಿಂಗೆ ನೀಡಲಾಗುವುದು.
ಸೌಲಭ್ಯ ಪಡೆಯಲು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕಿಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಭೇಟಿಯಾಗಿ ಪಡೆಯಬಹುದಾಗಿದೆ.
ದಕ್ಷಿಣಕನ್ನಡ ಜಿಲ್ಲೆಯನ್ನು ಪೈಲೆಟ್ ಯೋಜನೆಯಲ್ಲಿ ಸೇರಿಸಿದ್ದು ಇಲ್ಲಿ ವೆನ್ಲಾಕ್ ಮತ್ತು ಲೇಡಿಗೋಷನ್ ಹಾಗೂ ಕೆಎಂಸಿ ಆಸ್ಪತ್ರೆಗಳಲ್ಲಿ ಬಾಲ ಸಂಜೀವಿನಿ ಚಿಕಿತ್ಸೆ ಲಭ್ಯವಿದೆ.ಯೋಜನೆ 2011 ರ ಎಪ್ರಿಲ್ ನಿಂದ ಜಾರಿಗೆ ಬಂದಿದ್ದು,ಮೇಲಿನ ಮೂರು ಆಸ್ಪತ್ರೆಗಳಲ್ಲಿ 2012 ರ ಮಾಚ್ರ್ ಅಂತ್ಯದ ವರೆಗೆ ಒಟ್ಟು 606 ಶಿಶು/ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಇವರ ಚಿಕಿತ್ಸೆಗೆ ಒಟ್ಟು ರೂ.54.85 ಲಕ್ಷ ವೆಚ್ಚವಾಗಿದ್ದುಯ ಇದರಲ್ಲಿ ಪ್ರಯಾಣ ವೆಚ್ಚ ಹಾಗೂ ದಿನಭತ್ಯೆಗಾಗಿ ರೂ.8.52 ಲಕ್ಷ ಹಾಗೂ ಔಷಧೋಪಚಾರಗಳಿಗಾಗಿ ರೂ.46.33 ಲಕ್ಷ ವೆಚ್ಚವಾಗಿದೆಯೆಂದು ಬಾಲ ಸಂಜೀವಿನಿ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ತಿಳಿಸಿದ್ದಾರೆ.