Saturday, June 23, 2012

ಮಳೆಗಾಲದ ಸಾಂಕ್ರಾಮಿಕ ರೋಗ ತಡೆಗೆ ತುರ್ತು ಸಭೆ,ಜುಲೈ 1 ರಿಂದ ಮನೆ ಮನೆ ಭೇಟಿ

ಮಂಗಳೂರು,ಜೂನ್.23: ನಗರದಲ್ಲಿ ಹರಡುತ್ತಿರುವ ಡೆಂಗ್ಯು, ಮಲೇರಿಯಾ ರೋಗ ನಿಯಂತ್ರಣಕ್ಕೆ ಮಹಾನಗರಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ತುರ್ತು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ನಿರ್ದೇಶನ ನೀಡಿದರು.
ಈ ಸಂಬಂಧ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಕ್ಕೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ಹಾಗೂ ಕಾರ್ಮಿಕರು ಕಾರಣವಾದರೆ ತಕ್ಷಣವೇ ಅಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು. ಪಾಲಿಕೆ ಆರೋಗ್ಯ ವಿಭಾಗದಿಂದ 42 ಜನ ಹಾಗೂ ಆರೋಗ್ಯ ಇಲಾಖೆಯಿಂದ 30 ಕಿರಿಯ ಆರೋಗ್ಯ ಸಹಾಯಕರು ಗ್ರಾಮೀಣ ಪ್ರದೇಶದಿಂದ ನಿಯೋಜಿಸಿ,30 ಸ್ವಯಂ ಸೇವಕರು ಜುಲೈ ಒಂದರಿಂದ ತಂಡ ಪ್ರತೀ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ವನ್ನು ಪತ್ತೆ ಹಚ್ಚಲಿದೆ. ಈ ಕಾರ್ಯಕ್ರಮ ಆಂದೋಲನ ಮಾದರಿ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ರೋಗ ಪತ್ತೆಯಾದ ಪ್ರದೇಶದ ಮನೆಗಳ ರಕ್ತ ಪರೀಕ್ಷೆ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸೊಳ್ಳೆ ಉತ್ಪತ್ತಿ ಕೇಂದ್ರ ನಾಶಕ್ಕೆ ಒತ್ತು ನೀಡಿ, ಜನರಿಗೆ ತಿಳುವಳಿಕೆ ರೂಪಿಸುವ ಹೊಣೆ ಇಲಾಖೆಗಳದ್ದು ಎಂದು ಜಿಲ್ಲಾಧಿಕಾರಿಗಳು ನುಡಿದರು.
ಕಟ್ಟಡ ನಿಮರ್ಾಣ ಮಾಡುವವರು ತಮ್ಮ ಕಟ್ಟಡಗಳ ಸುತ್ತಮುತ್ತ ನಿಲ್ಲಿಸಿದ ನೀರಿಗೆ ಲಾರ್ವಾ ನಾಶಕ ಔಷಧಿ ಸಿಂಪಡಣೆ, ಕಟ್ಟಡ ಕಾಮಗಾರಿಯಲ್ಲಿ ನಿರತ ಕಾರ್ಮಿಕರಿಗೆ ಸುರಕ್ಷಿತ ವಾಸಸ್ಥಳ, ಸೊಳ್ಳೆ ಪರದೆ ಒದಗಿಸುವ ಹೊಣೆ ಹೊರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ವೈದ್ಯರು ಅಲಭ್ಯವಿರುವ ಕಾರಣ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ದಕ್ಷ ವೈದ್ಯರೊಬ್ಬರನ್ನು ನಿಯೋಜಿಸಿ ಹೆಚ್ಚುವರಿ ಪ್ರಭಾರ ನೀಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಡಿ ಎಚ್ ಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಡಿ ಎಚ್ ಒ ಒ ಆರ್ ಶ್ರೀರಂಗಪ್ಪ, ಡಿ ಎಂ ಒ ಡಾ ಅರುಣ್. ಎಂಟಮೋಲಾಜಿಸ್ಟ್(ಕೀಟ ಶಾಸ್ತ್ರ ತಜ್ಞೆ) ಮುಕ್ತಾ, ಡಾ ಸುದರ್ಶನ್, ಹಿರಿಯ ಆರೋಗ್ಯ ನಿರೀಕ್ಷಕ ಜಯರಾಂ ಸೇರಿದಂತೆ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.