Wednesday, June 13, 2012

ವೈದ್ಯಕೀಯ ಜೈವಿಕ ತ್ಯಾಜ್ಯ ಬೇರೊಬ್ಬರ ಜೀವಕ್ಕೆ ಹಾನಿಯಾಗದಿರಲಿ-ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು, ಜೂನ್.13:ರೋಗಿಯ ರೋಗವನ್ನು ವಾಸಿ ಮಾಡಿ ಆತ ಸದೃಡನನ್ನಾಗಿಸುವಲ್ಲಿ ವೈದ್ಯರು ತೋರುವ ಮುತುವರ್ಜಿ ಆಸಕ್ತಿ ಆತನಿಗೆ /ಅವಳಿಗೆ ಚಿಕಿತ್ಸೆ ನೀಡುವಾಗ ಉತ್ಪನ್ನವಾಗುವ ಜೈವಿಕ ತ್ಯಾಜ್ಯ ವಿಲೇವಾರಿಯಲ್ಲಿ ಆಸಕ್ತಿ ತೋರಬೇಕು .ಇಲ್ಲದ್ದಿದ್ದರೆ ಅದರಿಂದ ಬೇರೆಯವರ ಆರೋಗ್ಯ ಜೀವಕ್ಕೆ ಹಾನಿಕಾರಕವಾಗಬಹುದು ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ತಿಳಿಸಿದ್ದಾರೆ.
ಅವರು ಇಂದು ನಗರದ ವೆನ್ಲಾಕ್ ಆಸ್ಪತ್ರೆ ಆರ್ಎಪಿಸಿಸಿ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಬೆಂಗಳೂರು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ ಇವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ದ.ಕ. ಇವರ ಸಹ ಯೋಗ ದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 26 ಸಾವಿರ ಆಸ್ಪತ್ರೆಗಳಿದ್ದು ಇವುಗಳಿಂದ ಪ್ರತೀನಿತ್ಯ 73 ಟನ್ನಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದ್ದು,ಈ ತ್ಯಾಜ್ಯ ಮಾನವ ಹಾಗೂ ಇತರೆ ಜೀವಿಗಳಿಗೆ ಹಾನಿಕಾರಕವಾಗದಂತೆ ವೈಜ್ಞಾನಿಕವಾಗಿ ವಿಲೇ ಮಾಡಬೇಕೆಂದರು. ದಕ್ಷಿಣಕನ್ನಡ ಜಿಲ್ಲೆ ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂಬುದಾಗಿ `` ಸ್ವಚ್ಛ ಜಿಲ್ಲೆ '' ಪುರಸ್ಕಾರಕ್ಕೆ ಪಾತ್ರವಾಗಿದ್ದು,ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಾಲ ಪಂಚಾಯತ್ನಲ್ಲಿ ಉತ್ಪಾದಿಸುತ್ತಿರುವ ಕಡಿಮೆ ದರದ ಸೇಫ್ಟಿ ನ್ಯಾಪ್ಕಿನ್ ಗಳಿಗೆ 15 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಮಹಿಳೆಯರಿಂದ ಬೇಡಿಕೆ ಬಂದಿದೆ. ಇನ್ನು ಮುಂದೆ ಜಿಲ್ಲೆಯ ಶಾಲೆಗಳಲ್ಲಿ ಆಸ್ಪತ್ರೆಗಳಲ್ಲಿ ನ್ಯಾಪ್ಕಿನ್ ಡಿಸ್ಪೋಸೆಬಲ್ ಟಿನ್ ಗಳನ್ನು ಇಡಲು ಯೋಜಿಸಲಾಗುತ್ತಿದೆಯೆಂದರು. ಇಂದು ಘನ,ದ್ರವ,ತ್ಯಾಜ್ಯಗಳ ವಿಲೇವಾರಿ ಸಮಸ್ಯೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿದೆ.ಆದ್ದರಿಂದ ನಾವು ನಮ್ಮ ಗ್ರಾಮೀಣ ಮಹಿಳೆಯರಲ್ಲಿ ಸೇಫ್ಟಿ ನ್ಯಾಪ್ಕಿನ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವುಗಳ ಸರಬರಾಜಿಗೆ ಕ್ರಮ ವಹಿಸುವಂತೆ ವೈದ್ಯಾಧಿಕಾರಿಗಳನ್ನು ವಿನಂತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಚ್.ವಿನಯಕುಮಾರ್ ಅವರು ಮಾತನಾಡಿ ರಾಜ್ಯದ 13 ಜಿಲ್ಲೆಗಳಲ್ಲಿ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಂಡು 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದೆಂದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಡಾ.ವಾಮನ ಕುಲಕರ್ಣಿಯವರು ,ಮಾತನಾಡಿ ವಿಶ್ವದಲ್ಲಿ 1.60ಲಕ್ಷ ಎಚ್ಐವಿ ರೋಗಿಗಳು ಇಂಜೆಕ್ಷನ್ ಸೂಜಿಗಳ ನಂಜು ಕಾರಣದಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. 8 ಮಿಲಿಯನ್ಗೂ ಅಧಿಕ ಜನ ಇಂಜೆಕ್ಷನ್ ಸೂಜಿಗಳನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡದ ಕಾರಣದಿಂದ ಹೈಪಟೈಟಸ್ ಬಿ ರೋಗಕ್ಕೆ ತುತ್ತಾಗುತ್ತಿದ್ದಾರೆಯೆಂದು ತಿಳಿಸಿ ಆಸ್ಪತ್ರೆಗಳ ತ್ಯಾಜ್ಯ ಶೇಕಡಾ 90ರಷ್ಟು ಸುರಕ್ಷಿತವಾದದ್ದು ಆದರೆ ಶೇಕಡಾ 10 ರಷ್ಟು ಅಸುರಕ್ಷಿತವಾಗಿದ್ದು ಇದು ಅತ್ಯಂತ ಹಾನಿಕಾರಕವಾದುದು ಎಂದು ತಿಳಿಸಿದರು.
ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ಹೇಮಲತಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು,ಸಿಬ್ಬಂದಿಗಳು,ಮುಂತಾದವರು ಹಾಜರಿದ್ದರು.