Friday, March 18, 2011

ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ಉದ್ಯಾನವನ ನಿರ್ವಹಣೆ

ಮಂಗಳೂರು,ಮಾ.18: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಸಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಸ್ತೆ ಉದ್ಯಾನವನ ನಿರ್ವಹಣೆ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಾಲನೆ ನೀಡಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾದ 22 ಪ್ರಮುಖ ರಸ್ತೆಗಳು ಹಾಗೂ ಐದು ಉದ್ಯಾನವನಗಳ ನಿರ್ವಹಣೆಗಾಗಿ ಕಂಕನಾಡಿ ಕರಾವಳಿ ವೃತ್ತದಿಂದ ಪಂಪ್ ವೆಲ್ ವೃತ್ತದವರೆಗಿನ ರಸ್ತೆ ನಿರ್ವಹಣೆಗಾಗಿ ದುರ್ಗಾ ಫೆಸಿಲಿಟೀಸ್ ಸಂಸ್ಥೆ ಮುಂದೆ ಬಂದಿದೆ. ಸಭೆಯಲ್ಲಿ ವಿವಿಧ ಬ್ಯಾಂಕ್ ಹಾಗೂ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈಗಾಗಲೇ 15 ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ನಗರವನ್ನು ಸುಂದರವಾಗಿಡುವುದರ ಜೊತೆ ರಸ್ತೆಗಳನ್ನು, ಉದ್ಯಾನವನಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾರ್ವಜನಿಕ ಸಂಘ ಸಂಸ್ಥೆಗಳು, ಉದ್ಯಮದಾರರು, ರಾಷ್ಟ್ರೀಕೃತ ಬ್ಯಾಂಕ್ ಗಳು ಆಸಕ್ತಿ ವಹಿಸುವುದರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕೋಶದ ಅಧಿಕಾರಿಗಳು ಉಪಸ್ಥಿತರಿದ್ದರು.