Saturday, March 19, 2011

ಪಡಿತರ ವ್ಯವಸ್ಥೆ: ಜಿಲ್ಲಾಧಿಕಾರಿ ಅಸಮಾಧಾನ

ಮಂಗಳೂರು,ಮಾರ್ಚ್.19:ಜನಸಾಮಾನ್ಯರ ಅನುಕೂಲಕ್ಕಾಗಿ ರೂಪಿಸಿರುವ ಪಡಿತರ ವ್ಯವಸ್ಥೆ ಬಗ್ಗೆ ಇಲಾಖೆಯವರಿಗೇ ಸಮರ್ಪಕ ಮಾಹಿತಿ ಇಲ್ಲ. ಇಂತಹವರಿಂದ ಕಾರ್ಯಕ್ರಮ ವ್ಯವಸ್ಥಿತ ಅನುಷ್ಠಾನ ಹೇಗೆ ಸಾಧ್ಯ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಪ್ರಶ್ನಿಸಿದರು.

ಇಂದು ತಮ್ಮ ಕಚೇರಿ ಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿ ಕಾರಿಗಳು, ಪಡಿತರ ಪೂರೈಕೆ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿದರಲ್ಲದೆ, ಆಹಾರ ನಿರೀಕ್ಷಕರು ಮತ್ತು ಶಿರಸ್ತೇದಾರರ ಕರ್ತವ್ಯ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಫೀಲ್ಡ್ ಲೆವೆಲ್ ನಲ್ಲಿ ಕರ್ತವ್ಯ ನಿರ್ವಹಿಸುವವರು ಕರ್ತವ್ಯವನ್ನು ಅದಕ್ಷತೆಯಿಂದ ಮಾಡುತ್ತಿದ್ದು, ತಕ್ಷಣವೇ ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಬೇಕಿದೆ ಎಂದು ಎಚ್ಚರಿಸಿದರು.
ಇಲಾಖೆಯ ಉಪನಿರ್ದೇಶಕರು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ತಕ್ಷಣವೇ ನೀಡಬೇಕೆಂದ ಜಿಲ್ಲಾಧಿಕಾರಿಗಳು, ಫೀಲ್ಡ್ ಲೆವಲ್ ನಲ್ಲಾಗುವ ಲೋಪಗಳು ಸರ್ಕಾರದ ನೀತಿ ನಿರೂಪಣೆಯ ಸಂದರ್ಭದಲ್ಲಿ ಪರಿಣಾಮ ಬೀರುತ್ತದೆ. ಇಂತಹ ಲೋಪಗಳಿಗೆ ಅಧಿಕಾರಿಗಳು ಅವಕಾಶ ನೀಡದೆ ಸಮರ್ಪಕವಾಗಿ ಮಾಹಿತಿಯನ್ನು ನೀಡಬೇಕೆಂದರು.ಜಿಲ್ಲೆಯಲ್ಲಿ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಬೆಳ್ತಂಗಡಿ, ಮಂಗಳೂರಿನಲ್ಲಿ ಸಮಸ್ಯೆಗಳು ಹೆಚ್ಚಿವೆ ಎಂದರು. ವಿದ್ಯುತ್ ಮೀಟರ್ ಮತ್ತು ಪಡಿತರ ಚೀಟಿ ಹೊಂದಾಣಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,11,473 ಗ್ಯಾಸ್ ಸಂಪರ್ಕವಿದ್ದು, ಆರ್ ಆರ್ ನಂಬರ್ 2,26,066 ಮಾತ್ರ ಇಲಾಖೆ ಸ್ವೀಕರಿಸಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಉಪನಿರ್ದೇಶಕರು ಹೇಳಿದರು. ಸಿಂಗಲ್ ಸಿಲಿಂಡರ್ ಹಾಗೂ ಡಬ್ಬಲ್ ಸಿಲಿಂಡರ್ ಹೊಂದಿರುವವರ ಮಾಹಿತಿ ಪಟ್ಟಿಯನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪಡಿತರ ಚೀಟಿಗೆ ಸಂಬಂಧಿಸಿದಂತೆ ಪಂಚತಂತ್ರದ ಅಡಿ ಮಾಹಿತಿ ನೀಡಲು ಕಾಲಮಿತಿ ನಿಗದಿಪಡಿಸಿದ ಜಿಲ್ಲಾಧಿಕಾರಿಗಳು, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಕೆ ಎಸ್ ಎಫ್ ಸಿ ಗೆ ಸಾಗಿಸುವ ಪ್ರಕ್ರಿಯೆ ಹಾಗೂ ಅಲ್ಲಿಂದ ನ್ಯಾಯಬೆಲೆ ಅಂಗಡಿಗೆ ಆಹಾರ ಪೂರೈಕೆ ವ್ಯವಸ್ಥೆಯಲ್ಲಿ ಆಹಾರ ಇಲಾಖೆಯ ಸಿಬ್ಬಂದಿಗಳ ಸಕ್ರಿಯ ಪಾತ್ರ ಇಲ್ಲದಿರುವುದನ್ನು ಗಮನಿಸಿದರು. ಗುಣಮಟ್ಟ ಮತ್ತು ತೂಕದ ವ್ಯವಸ್ಥೆಯಲ್ಲೂ ತಾಂತ್ರಿಕ ಕೌಶಲ್ಯವಿಲ್ಲದ ಸಿಬ್ಬಂದಿಗಳ ಕರ್ತವ್ಯ ನಿರ್ವಹಿಸುವಿಕೆ ಸರಿ ಇಲ್ಲ ಎಂದ ಜಿಲ್ಲಾಧಿಕಾರಿಗಳು, ಎಲ್ಲವೂ ಕೇವಲ ದಾಖಲೆಗಳಲ್ಲಿ ಮಾತ್ರ ಸಾಗುತ್ತಿದ್ದು, ಕಾರ್ಯದಲ್ಲಿ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸೀಮೆ ಎಣ್ಣೆ ಪೂರೈಕೆಯಲ್ಲಿ, ಗ್ಯಾಸ್ ವಿತರಣೆಯಲ್ಲಾಗುವ ಲೋಪಗಳ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಗಮನ ಸೆಳೆದ ಜಿಲ್ಲಾಧಿಕಾರಿಗಳು, ಮೂಲಭೂತ ಕರ್ತವ್ಯಗಳನ್ನೇ ಇಲಾಖೆ ಮಾಡುತ್ತಿಲ್ಲ. ಇಂದಿನ ಲೋಪದೋಷಗಳನ್ನು ಸರಿಪಡಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಜಾಗೃತಿ ಸಮಿತಿಯ ಕಾರ್ಯ ವೈಖರಿ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಗ್ರ ಮಾಹಿತಿ ಕುರಿತು ಫಲಕಗಳನ್ನು ಹಾಕುವ ಬಗ್ಗೆಯೂ ಆಹಾರ ನಿರೀಕ್ಷಕರು ಗಮನಹರಿಸಬೇಕು ಎಂದರು. ಜಾಗೃತಿ ಸಮಿತಿಯಲ್ಲಿರುವ ಮಹಿಳೆಯರು ನೀಡುವ ಅಭಿಪ್ರಾಯಗಳನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು. ಅವರ ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಪಡಿತರ ಸಂಬಂಧ ದೂರು ದುಮ್ಮಾನ ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ಒಂದು ಮೊಬೈಲ್ ನಂಬರ್ ಮತ್ತು ಸಿಬ್ಬಂದಿಯನ್ನು ನೇಮಿಸಬೇಕು ಎಂದು ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 26 ಗ್ಯಾಸ್ ಏಜೆನ್ಸಿಗಳಿದ್ದು, 17 ಏಜೆನ್ಸಿಗಳು ನಗರದಲ್ಲಿವೆ. ಎಂದು ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.