Tuesday, March 29, 2011

ಜಿಲ್ಲಾಧಿಕಾರಿ ನ್ಯಾಯಾಲಯ: 4 ತಿಂಗಳಲ್ಲಿ 80 ಪ್ರಕರಣ ಇತ್ಯರ್ಥ

ಮಂಗಳೂರು, ಮಾರ್ಚ್.29:ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ದಾಖಲಾಗುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಕಾಲಮಿತಿ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ.

ಸುಬೋಧ್ ಯಾದವ್ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಾಲ್ಕು ತಿಂಗಳುಗಳಲ್ಲಿ 80 ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದ್ದಾರೆ. ಸರಾಸರಿ ತಿಂಗಳಿಗೆ 20 ಪ್ರಕರಣಗಳಂತೆ ಇತ್ಯರ್ಥಪಡಿಸಲಾಗಿದೆ. ಸುಬೋಧ್ ಯಾದವ್ ಅಧಿಕಾರ ವಹಿಸಿಕೊಂಡಾಗ 230 ಪ್ರಕರಣಗಳು ಆದೇಶಕ್ಕಾಗಿ ಕಾಯುತ್ತಿದ್ದವು. ಇದರಲ್ಲಿ 2006ರ ಪ್ರಕರಣಗಳೂ ತೀರ್ಪಿಗಾಗಿ ಬಾಕಿ ಇದ್ದವು. ಅಧಿಕಾರ ವಹಿಸಿಕೊಂಡ ಮೊದಲ ತಿಂಗಳಲ್ಲಿ ಚುನಾವಣೆ ಕಾರಣ ಕೋರ್ಟ್ ಕಲಾಪ ನಡೆಸಲಾಗಿಲ್ಲ. ಮುಂದಿನ ಮೂರು ತಿಂಗಳಲ್ಲಿ 230ರಲ್ಲಿ 50 ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ ಅಂತಿಮ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸೇರ್ಪಡೆಯಾದ 45 ಹೊಸ ಪ್ರಕರಣಗಳಲ್ಲಿ 25 ಪ್ರಕರಣಗಳನ್ನು ವಿಚಾರಣೆಗೊಳಪಡಿಸಿ ಇತ್ಯರ್ಥ ಪಡಿಸಲಾಗಿದೆ. ಮುಂದೆ ವಿಚಾರಣೆ ಮತ್ತು ಆದೇಶಗಳಲ್ಲಿ ವಿಳಂಬವಾಗದಿರಲು ಸೂಕ್ತ ವ್ಯವಸ್ಥೆ ರೂಪಿಸಲಾಗಿದೆ.
2010-11ರಿಂದ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕಾಲಮಿತಿ ನಿಗದಿಪಡಿಸಿ ಇತ್ಯರ್ಥ ಪಡಿಸಲು ನಿರ್ಧರಿಸಲಾಗಿದೆ. ಎಲ್ಲಾ ಪ್ರಕರಣಗಳ ಮಾಹಿತಿಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆದೇಶದಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಸಮಗ್ರ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಜಿಲ್ಲಾಧಿಕಾರಿ ನ್ಯಾಯಾಲಯದ ಮೇಲೆ ಜನತೆಯ ವಿಶ್ವಾಸ ಹೆಚ್ಚಾಗಲಿದೆ ಎಂದು ಸುಬೋಧ್ ಯಾದವ್ ತಿಳಿಸಿದ್ದಾರೆ.