Saturday, March 12, 2011

ವಾಜಪೇಯಿ ನಗರ ವಸತಿ ಯೋಜನೆ: 448 ಫಲಾನುಭವಿಗಳು

ಮಂಗಳೂರು,ಮಾರ್ಚ್.12:ವಾಜಪೇಯಿ ನಗರ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ 2010-11ನೇ ಸಾಲಿಗೆ 826 ಅರ್ಜಿಗಳನ್ನು ಸ್ವೀಕರಿಸಿದ್ದು, 448 ಆಶ್ರಯ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ನಿಗಮದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಯೋಜನಾ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.]

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಬಂಟ್ವಾಳ ತಾಲೂಕಿನಿಂದ 68 ಅರ್ಜಿಗಳನ್ನು ಸ್ವೀಕರಿಸಿದ್ದು, 18 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ನಿಗಮದ ಅನುಮೋದನೆಗೆ ಕಳುಹಿಸಲಾಗಿದೆ. ಬೆಳ್ತಂಗಡಿಯಲ್ಲಿ 12 ಅರ್ಜಿಗಳಲ್ಲಿ 10 ಅರ್ಜಿಗಳು ಅನುಮೋದನೆಗೆ ಕಳುಹಿಸಲ್ಪಟ್ಟಿದೆ. ಮೂಡಬಿದ್ರೆಯಲ್ಲಿ 112 ಅರ್ಜಿಗಳಲ್ಲಿ 109 ಫಲಾನುಭವಿಗಳ ಪಟ್ಟಿ ಸಲ್ಲಿಕೆಯಾಗಿದೆ. ಮೂಲ್ಕಿಯಲ್ಲಿ 20ರಲ್ಲಿ 18 ಅನುಮೋದನೆಗೆ ಕಳುಹಿಸಲಾಗಿದೆ. ಪುತ್ತೂರಿನಿಂದ 131ರಲ್ಲಿ 26 ಫಲಾನುಭವಿಗಳ ಆಯ್ಕೆ ಪಟ್ಟಿ ಕಳುಹಿಸಲಾಗಿದೆ. ಸುಳ್ಯದಿಂದ 51ರಲ್ಲಿ 35, ಉಳ್ಳಾಲದಿಂದ 148 ಅರ್ಜಿಗಳಲ್ಲಿ 97 ಫಲಾನುಭವಿಗಳ ಅಂತಿಮಪಟ್ಟಿ, ಮಂಗಳೂರು ಮಹಾನಗರಪಾಲಿಕೆಯಿಂದ 284ರಲ್ಲಿ 135 ಫಲಾನುಭವಿಗಳ ಅಂತಿಮಪಟ್ಟಿಯನ್ನು ನಿಗಮದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ಡಿ ಒ ಲೆಟರ್ (ನೆನಪಿನೋಲೆ) ಬರೆಯಲು ನಿರ್ಧರಿಸಿದರಲ್ಲದೆ, ತಮ್ಮ ಕಾರ್ಯಶೈಲಿ ಬದಲಿಸದಿದ್ದರೆ ಜನರಿಗೆ ಉತ್ತರ ಹೇಳುವ ಹೊಣೆಯೂ ಅವರದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ನಗರ ಮುಖ್ಯಾಧಿಕಾರಿಗಳು ತಮ್ಮ ಅಧಿಕಾರವನ್ನು ಅರಿತು ಸದ್ಬಳಕೆ ಮಾಡಿ ಜನಹಿತಕ್ಕೆ ವಿರೋಧವಾಗಿ ಯಾವುದೇ ಕಂಪೆನಿ, ನಿಗಮಗಳು ಕಾರ್ಯನಿರ್ವಹಿಸಿದರೆ ತಕ್ಷಣ ಅದನ್ನು ನಿಲ್ಲಿಸಬೇಕು. ಮುಖ್ಯಾಧಿಕಾರಿಗಳ ಗಮನಕ್ಕೆ ತಾರದೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯಬಾರದು. ಜನಹಿತಕ್ಕೆ ವಿರುದ್ಧವಾಗಿ ಕಾಮಗಾರಿಗಳಾದರೆ ತಕ್ಷಣ ತಡೆ ಹಿಡಿಯಿರಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದೇ ಸಂದರ್ಭದಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆಯ ಬಗ್ಗೆಯೂ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ಕೊಂಡರು. ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರು ಪೂರೈಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.