Thursday, March 17, 2011

157 ಅನಧಿಕೃತ ಕಟ್ಟಡ ತೆರವು

ಮಂಗಳೂರು,ಮಾರ್ಚ್.17:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ ತೊಂದರೆಯಾಗುವ 157 ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವುಗೊಳಿಸಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ತಿಳಿಸಿದರು. ಅವರು ದಿನಾಂಕ 16-3-11 ರಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಇದೀಗ ಮೂರು ವಾರಗಳಿಗೊಮ್ಮೆ ನಡೆಯುವ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತೀ ತಾಲೂಕಿನ ಮಂಗಳೂರು,ಬಂಟ್ವಾಳ,ಪುತ್ತೂರು,ಸುಳ್ಯ,ಬೆಳ್ತಂಗಡಿ,ಮೂಡಬಿದಿರೆ,ಕಡಬದಲ್ಲಿಯಾದ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನು ಪಡೆದರು. ತಹಶೀಲ್ದಾರರುಗಳಲ್ಲಿ ಪ್ರತೀ ಅನಧಿಕೃತ ಕಟ್ಟಡಗಳ ಬಗ್ಗೆ ಪ್ರಗತಿಯನ್ನು ವಿಚಾರಿಸಿ,ತೆರವುಗೊಂಡ ಬಗ್ಗೆ ವರದಿಯನ್ನು ತಕ್ಷಣವೇ ನೀಡುವಂತೆ ಸೂಚಿಸಿದರು.ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯಾವುದೇ ಪ್ರಕರಣಗಳು ಬಾಕಿಉಳಿಯದೇ ಎಲ್ಲಾ ಪ್ರಕರಣಗಳುಮುಗಿದಿರಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸುಬ್ರಹ್ಮಣ್ಯೇಶ್ವರ ರಾವ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಂಗಳೂರು ಉಪವಿಭಾಗಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಮುಂತಾದ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.