Friday, March 18, 2011

ಮಾ.27: ಮನಪಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಅಭಿಯಾನ

ಮಂಗಳೂರು,ಮಾರ್ಚ್.18: ಮಂಗಳೂರು ಮಹಾನಗರ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ವಿಶೇಷ ಅಭಿಯಾನವನ್ನು ಮಾರ್ಚ್ 27 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಪಾಲಿಕೆ ವ್ಯಾಪ್ತಿ ಯಲ್ಲಿ ಒಂಭತ್ತು ಪ್ರದೇಶ ಗಳಲ್ಲಿ ವಿವಿಧ ಸಂಘ ಸಂಸ್ಥೆ ಗಳು ಹಾಗೂ ಸಾರ್ವ ಜನಿಕ ಸಹ ಭಾಗಿತ್ವ ದೊಂದಿಗೆ ಒಂದು ದಿನದ ಸಾಮೂಹಿಕ ಶುಚಿತ್ವದ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಎನ್ನೆಸ್ಸೆಸ್ ತಂಡದವರು ಬಲ್ಮಠ ಮಿಶನ್ ಕಂಪೌಂಡ್ ಅತ್ತಾವರ, ಕೆಎಂಸಿ, ಪ್ರದೇಶದ ರಸ್ತೆ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಎಂ.ಸಿ.ಆರ್.ಟಿ. ಸಂಘಟನೆಯವರು ಕದ್ರಿ ಟೋಲ್ ಗೇಟ್ ನಿಂದ ನಂತೂರು ಪ್ರದೇಶ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಜೆಪ್ಪು ಸಂಘಟನೆಯವರು, ಫಾದರ್ ಮುಲ್ಲರ್ ಆಸ್ಪತ್ರೆ, ನಂದಿಗುಡ್ಡೆ ಪ್ರದೇಶ, ಕ್ಯಾಂಪಸ್ ಫ್ರಂಟ್ ಇಂಡಿಯಾದ ವತಿಯಿಂದ ಶ್ರೀನಿವಾಸ ಕಾಲೇಜು ಹಿಂಭಾಗ, ಸುಭಾಷ್ ನಗರ ಪ್ರದೇಶ, ಸರಕಾರಿ ನೌಕರರ ಸಂಘಟನೆಯಿಂದ ಉರ್ವಸ್ಟೋರ್, ಹ್ಯಾಟ್ ಹಿಲ್, ಪೊಲೀಸ್ ಯೂತ್ ಕ್ಲಬ್ ವತಿಯಿಂದ ಹೊನ್ನಕಟ್ಟೆ, ಕಾನ ರಸ್ತೆ ಪ್ರದೇಶ, ಗೃಹ ರಕ್ಷಕ ದಳ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾಧಿಕಾರಿ ಎಸ್ಪಿ, ಐಜಿಪಿ ಕಚೇರಿ ಆವರಣ, ಬೈಕಂಪಾಡಿ ರೋಟರಿ ಕ್ಲಬ್ ವಿದ್ಯಾರ್ಥಿ ಸಂಘ, ಗೃಹರಕ್ಷಕದಳ ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶ ಸಂಘಟನೆ ವತಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದೆ ಬಂದಿದ್ದಾರೆ. ಮಂಗಳೂರು ಪರಿಸರದಲ್ಲಿ ಶಾಶ್ವತವಾಗಿ ಸ್ವಚ್ಛತೆಯನ್ನು ಕಾಪಾಡಲು ಜನಜಾಗೃತಿ ಮುಖ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಸ್ಥಳೀಯ ಜನರನ್ನು ಸೇರಿಸಿ ತಮ್ಮ ಪರಿಸರದಲ್ಲಿ ಕಸಕಡ್ಡಿ, ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಜಾಗೃತಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಅಭಿಯಾನದಲ್ಲಿ ಅಧಿಕಾರಿಗಳೊಂದಿಗೆ ಸ್ಥಳೀಯರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ತಮ್ಮ ಪರಿಸರವನ್ನು ತಾವು ಶುಚಿಯಾಗಿಟ್ಟುಕೊಳ್ಳಬೇಕೆಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿಸುವುದು ಮತ್ತು ಆ ಮೂಲಕ ಮಂಗಳೂರಿನಲ್ಲಿ ಜನಸಹಭಾಗಿತ್ವದಲ್ಲಿ ಶಾಶ್ವತವಾಗಿ ಶುಚಿತ್ವವನ್ನು ಕಾಪಾಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಉಳಿದ ಪ್ರದೇಶಗಳಲ್ಲೂ ಮುಂದಿನ ಹಂತದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆಸಕ್ತ ಸಂಘ ಸಂಸ್ಥೆಗಳು, ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಡಾ. ವಿಜಯ ಪ್ರಕಾಶ್ ಸ್ವಾಗತಿಸಿ, ಅಭಿಯಾನದ ಬಗ್ಗೆ ವಿವರ ನೀಡಿದರು.