Wednesday, March 30, 2011

ಕಂದಾಯ ಅಧಿಕಾರಿಗಳ ಸಭೆ,49 ಎಕರೆ ಸರಕಾರಿ ಜಮೀನು ಒತ್ತುವರಿ ತೆರವು: ಸುಬೋಧ್

ಮಂಗಳೂರು,ಮಾರ್ಚ್.30:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒತ್ತುವರಿಗೆ ಒಳಗಾಗಿರುವ 1,203 ಎಕರೆ ಸರಕಾರಿ ಜಮೀನಿನ ಪೈಕಿ 49 ಎಕರೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಪರಿಣಾಮ 34 ಪ್ರಕರಣಗಳನ್ನು ಇತ್ಯರ್ಥಪಡಿಸಿದಂತಾಗಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದ್ದಾರೆ.

ಅವರು ಇಂದು ಬುಧವಾರ ತಮ್ಮ ಕಚೇರಿಯಲ್ಲಿ ಸರಕಾರಿ ಜಮೀನು ಒತ್ತುವರಿ ಕುರಿತು ಚರ್ಚಿಸಲು ಕಂದಾಯ ಅಕಾರಿಗಳ ಸಭೆ ನಡೆಸಿದರು.
ಸಭೆಗೆ ಮಾಹಿತಿ ನೀಡಿದ ಜಿಲ್ಲಾಕಾರಿ, ಜಿಲ್ಲೆಯಲ್ಲಿ 245 ಪ್ರಕರಣಗಳಲ್ಲಿ 1,203 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ಇದರಲ್ಲಿ 176 ಪ್ರಕರಣಗಳ 892 ಎಕರೆ ಜಮೀನಿಗೆ ಸಂಬಂಸಿ ತಹಶೀಲ್ದಾರರು ಈಗಾಗಲೇ ನೋಟೀಸು ಜಾರಿಗೊಳಿಸಿರುವರು ಎಂದರು.
ಸರಕಾರಿ ಜಮೀನು ಒತ್ತುವರಿ ಮಾಡಿರುವವರನ್ನು ಅವರೋಹಣ ಯಾದಿಯಲ್ಲಿ ಪಟ್ಟಿ ಮಾಡಿ ಕ್ರಮ ಜರುಗಿಸಬೇಕು. ಶ್ರೀಮಂತರು ಅತಿಕ್ರಮಿಸಿಕೊಂಡಿರುವ ಜಮೀನನ್ನು ಮೊದಲು ತೆರವುಗೊಳಿಸಬೇಕು. ಬಳಿಕ ಬಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಮಿಕ್ಕ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಸುಬೋಧ್ ಯಾದವ್ ಅಕಾರಿಗಳಿಗೆ ಸೂಚಿಸಿದರು.ತಹಶೀಲ್ದಾರರು ಕೇವಲ ನೋಟೀಸ್ ಜಾರಿ ಮಾಡಿ ಸುಮ್ಮನಿದ್ದರೆ ಸಾಲದು. ಅವರು ಒತ್ತುವರಿ ಜಮೀನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಕಾರಿಗಳು ನಿರ್ದೇಶನ ನೀಡಿದರು.
ಕಠಿಣ ಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಇಂತಹ 5 ಒತ್ತುವರಿ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿರುವುದನ್ನು ಜಿಲ್ಲಾಕಾರಿಗಳು ಸಭೆಯ ಗಮನಕ್ಕೆ ತಂದರು.
ಕೆರೆ ಒತ್ತುವರಿ ತೆರವು:
ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳ 12 ಕೆರೆಗಳ ಒತ್ತುವರಿ ತೆರವು ಗೊಳಿಸಲಾಗಿದೆ ಎಂದು ಜಿಲ್ಲಾಕಾರಿಗಳು ಈ ಸಂದರ್ಭ ತಿಳಿಸಿದರು. ಸರಕಾರಿ ಶಾಲಾ ಜಮೀನು ಒತ್ತುವರಿ ಪ್ರಕರಣಗಳಲ್ಲಿ ಶಿಕ್ಷಣಾಧಿಕಾರಿಗಳು ತಹಶೀಲ್ದಾರರೊಂದಿಗೆ ಚರ್ಚಿಸಿ ಜಮೀನಿನ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಸುಬೋಧ್ ಯಾದವ್ ಸೂಚಿಸಿದರು.
ಸರಕಾರಿ ಜಮೀನು ಒತ್ತುವರಿಯನ್ನು ತೆರವು ಮಾಡುವುದರಿಂದ ಜನತೆಗೆ ಅನುಕೂಲವಾಗಲಿದೆ. ಈ ದಿಸೆಯಲ್ಲಿ ಸಾರ್ವಜನಿಕರು ಕಂದಾಯ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಕಾರಿ ಪ್ರಭಾಕರ ಶರ್ಮಾ, ಸಹಾಯಕ ಆಯುಕ್ತರಾದ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಡಾ. ಹರೀಶ್ ಕುಮಾರ್ ಮತ್ತು ತಹಶೀಲ್ದಾರರು ಉಪಸ್ಥಿತರಿದ್ದರು.