Monday, March 7, 2011

ಮಾರ್ಚ್ 14ರಿಂದ 19ರವರೆಗೆ ನಗರದಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ

ಮಂಗಳೂರು, ಮಾರ್ಚ್.07:ಮಾರ್ಚ್ 14 ರಿಂದ 19 ರವರೆಗೆ ಕುಷ್ಠರೋಗ ನಿರ್ಮೂಲನಾ ಆಂದೋಲನಾ ಕಾರ್ಯಕ್ರಮವನ್ನು ಮಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ 'ಕುಷ್ಠರೋಗ ನಿರ್ಮೂಲನ ಮಂಗಳೂರು ನಗರ'ದಲ್ಲಿ ಸಭೆಯಲ್ಲಿ ಹೊಸ ಎಂ ಬಿ ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಚರ್ಚೆ ನಡೆಸಲಾಯಿತು.2010-11ನೇ ಸಾಲಿನಲ್ಲಿ ಮಂಗಳೂರು ನಗರದಲ್ಲಿ ಹೊಸದಾಗಿ ಒಟ್ಟು 17 ಪ್ರಕರಣಗಳನ್ನು ಪತ್ತೆ ಹಚ್ಚಿ ಎಂ ಡಿ ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಷ್ಠರೋಗ ನಿವಾರಣಾಧಿಕಾರಿ ಡಾ ಟಿ. ಎನ್. ಲೋಬೋ ಅವರು ಮಾಹಿತಿ ನೀಡಿದರು. ಆರೋಗ್ಯ ಇಲಾಖೆ ಕುಷ್ಠರೋಗ ತಜ್ಞರನ್ನೊಳಗೊಂಡ ಒಂದು ತಂಡದೊಂದಿಗೆ ರೋಗ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿರುವ, ವರದಿಯಾಗಿರುವ ಮತ್ತು ಚರ್ಮಲೇಪನ ಸಕಾರಾತ್ಮಕ (+ ve) ಪ್ರಕರಣಗಳನ್ನು ಗುರುತಿಸಿ ಜನವಸತಿ ಪ್ರದೇಶಗಳಲ್ಲಿ ಮನೆ ಭೇಟಿ ಮಾಡಿ ಆರೋಗ್ಯ ಶಿಕ್ಷಣ ನೀಡುವ, ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಶ್ರವಣ (ಆಡಿಯೋ) ಮಾಧ್ಯಮದ ಮೂಲಕ ಐಇಸಿ ಕೊಡಲು ರೈಲ್ವೇ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಶಂಕರ್ ಮೂರ್ತಿ ಸಮ್ಮತಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರವಾಸಿಗಳು ತಮ್ಮನ್ನು ತಾವೇ ಸ್ವಯಂ ಇಚ್ಛೆಯಿಂದ ಪರೀಕ್ಷಿಸಲು ಮನವಿ ಮಾಡಲಾಗಿದೆ. ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕುಷ್ಟ ರೋಗದ ಆರಂಭಿಕ ಲಕ್ಷಣ, ಅಂತಹ ಸ್ಪರ್ಶಜ್ಞಾನವಿಲ್ಲದ ಚರ್ಮದ ಮಚ್ಚೆಗಳಿದ್ದಲ್ಲಿ ಸ್ವಯಂ ಇಚ್ಛೆಯಿಂದ ಚರ್ಮರೋಗ ತಜ್ಞರಲ್ಲಿ ನಗರ ಕುಟುಂಬ ಕಲ್ಯಾಣ ಕೇಂದ್ರಗಳ ವೈದ್ಯರಲ್ಲಿ ಪರೀಕ್ಷಿಸಿಕೊಂಡು, ಸಲಹೆ, ಸೂಚನೆ, ಚಿಕಿತ್ಸೆ ಪಡೆಯಬಹುದಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀರಂಗಪ್ಪ ಉಪಸ್ಥಿತರಿದ್ದರು. ಡಾ. ಸ್ವರ್ಣರೇಖಾ ವೈದಾಧಿಕಾರಿ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಕೇಂದ್ರ ಮೂಡಬಿದ್ರಿ ಅವರು ಧನ್ಯವಾದ ಅರ್ಪಿಸಿದರು.