Saturday, March 19, 2011

'ಹೈನುಗಾರಿಕೆ ಪ್ರೋತ್ಸಾಹಿಸಲು 19795 ಫಲಾನುಭವಿಗಳಿಗೆ 14.33 ಕೋಟಿ ರೂ. ವಿತರಣೆ'

ಮಂಗಳೂರು,ಮಾರ್ಚ್.19:ಹೈನುಗಾರಿಕೆ ಲಾಭದಾಯಕವಾಗಿಸಲು ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ ರೂ.2ರಂತೆ ಪ್ರೋತ್ಸಾಹಧನವನ್ನು 9-9-2008ರಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಈವರೆಗೆ ಪಶುಸಂಗೋಪನೆ ಇಲಾಖೆ 19,795 ಫಲಾನುಭವಿಗಳಿಗೆ 14.33 ಕೋಟಿ ರೂ. ವಿತರಿಸಿದೆ ಎಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರಾದ ಡಾ. ಕೆ. ವಿ ಹಲಗಪ್ಪ ಅವರು ಹೇಳಿದರು.ಅವರು ಮಾರ್ಚ್ 18 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ವಾರ್ತಾ ಇಲಾಖೆ ಮತ್ತು ಕನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ವಿಸ್ತರಣಾ ಶಿಕ್ಷಣ ಕೇಂದ್ರ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇವರು ಆಯೋಜಿಸಿದ್ದ 'ಸಮಗ್ರ ಕೃಷಿಯಲ್ಲಿ ಹೈನುಗಾರಿಕೆ' ಕುರಿತ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಿದರು.ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಜಿಲ್ಲೆಯಲ್ಲಿ 2007ರ ಜಾನುವಾರು ಗಣತಿ ಪ್ರಕಾರ ಒಟ್ಟು 6,65,520 ಜಾನುವಾರುಗಳಿವೆ. ಹಸುಗಳು ಒಟ್ಟು 3,96,609, ಎಮ್ಮೆ 15,119, ಕುರಿ 307, ಮೇಕೆ 25,749, ಹಂದಿ 5332, ನಾಯಿ 2,21,401, ಇತರೆ 1003, ಹಾಗೂ ಕುಕ್ಕುಟ 13.22,880. ಇಂತಹ ವಿವಿಧ ಜಾನುವಾರುಗಳ ಆರೋಗ್ಯ ರಕ್ಷಣೆ ಇಲಾಖೆಯ ಧ್ಯೇಯವಾಗಿದೆ ಎಂದರು. ಕೋಳಿ ಸಾಕಣೆ, ಹಂದಿ ಸಾಕಣೆ, ಮೇವು ಅಭಿವೃದ್ಧಿ, ಕ್ಷೇತ್ರಾಭಿವೃದ್ದಿಗೆ ಪ್ರೋತ್ಸಾಹ ಧನದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೋಳಿ ಸಾಕಣೆಗೆ ವಿಫುಲ ಅವಕಾಶವಿದ್ದು, ಇಲಾಖೆಯಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸ್ವಸಹಾಯ ಸಂಘದ ಸದಸ್ಯರಿಗೆ ಈ ಕೇಂದ್ರದ ಮೂಲಕ ಗಿರಿರಾಜ ಕೋಳಿಗಳನ್ನು ನೀಡುವ ವ್ಯವಸ್ಥೆಯಿದೆ ಎಂದರು. ಜಾನುವಾರು ವಿಮಾ ಯೋಜನೆಯ ಲಾಭವನ್ನು ಕೃಷಿಕರಿಗೆ ವಿವರಿಸಿದರು.
ಪರಿಶಿಷ್ಟ ಜಾತಿ/ಪಂಗಡಗಳ ರೈತರಿಗೆ ರಾಜ್ಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ 2 ಮಿಶ್ರ ತಳಿ ಹಸು ಖರೀದಿಗೆ ಘಟಕ ವೆಚ್ಚ 70,000ಗಳಲ್ಲಿ ಶೇ. 60 ಸಹಾಯಧನ (42,000), ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಗಿರಿಜನ ಉಪಯೋಜನೆಯಡಿ ಶೇ. 75ರಷ್ಟು (52,500) ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿಗಳಿಗೆ ಮಿಶ್ರತಳಿ ಹಸು ಘಟಕ, ಗಿರಿರಾಜ ಕೋಳಿ ಘಟಕಗಳನ್ನು ನೀಡುವ ಅವಕಾಶವಿದೆ. ಘಟಕ ವೆಚ್ಚದ ಶೇ. 60ರಷ್ಟು ಸಹಾಯಧನವಿರುತ್ತದೆ. ಅದೇ ರೀತಿ ಕೋಳಿ ಘಟಕಕ್ಕೆ ಒಟ್ಟು ವೆಚ್ಚ ರೂ. 500 ಅದರಲ್ಲಿ 300 ಸಹಾಯಧನವಿರುತ್ತದೆ. ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ ಬಗ್ಗೆ ಸವಿವರ ಮಾಹಿತಿಯನ್ನು ಪವರ್ ಪಾಯಿಂಟ್ ಮೂಲಕ ರೈತರಿಗೆ ನೀಡಿದರು. ಬಳಿಕ ರೈತರ ಬೇಡಿಕೆಯಂತೆ ಏಪ್ರಿಲ್ ತಿಂಗಳಲ್ಲಿ ಸುಳ್ಯದಲ್ಲಿ ದನ ಮೇಳ ಆಯೋಜಿಸುವುದಾಗಿಯೂ ಉಪನಿರ್ದೇಶಕರು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮೀನುಗಾರಿಕಾ ಮಹಾವಿದ್ಯಾಲಯದ ಮಾಜಿ ವಿಸ್ತರಣಾ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಶಿವಾನಂದ ಮೂರ್ತಿಯವರು ಸಮಗ್ರ ಕೃಷಿಗೆ ರೈತರು ಒತ್ತು ನೀಡುವುದರಿಂದಾಗುವ ಅನುಕೂಲಗಳನ್ನು ವಿವರಿಸಿದರು. ಬೆಳ್ಳಾರೆ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಾಧವ ಗೌಡ ಅವರು ಸಂಕಿರಣ ಉದ್ಘಾಟಿಸಿ, ಮಾಹಿತಿ ಕಾರ್ಯಕ್ರಮಗಳ ಸದುಪಯೋಗ ಪಡೆಯುವಂತೆ ಸಲಹೆ ಮಾಡಿದರು. ತಾಲೂಕು ಪಂಚಾಯತ್ ಸದಸ್ಯರಾದ ಅನಿಲ್ ರೈ, ಬೆಳ್ಳಾರೆ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಕಂದಸ್ವಾಮಿ, ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ. ಎಚ್. ಎನ್. ಆಂಜನೇಯಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಮೀನುಗಾರಿಕಾ ವಿಶ್ವವಿದ್ಯಾಲಯದ ಮಲ್ಲೇಶ್ ಅವರು ವಂದಿಸಿದರು.