Friday, March 11, 2011

ಕರ್ನಾಟಕ ಭವ್ಯ ಪರಂಪರೆಯ ಸಾಕ್ಷಾತ್ಕಾರ

ಬೆಳಗಾವಿ,ಮಾರ್ಚ್,11:ಸಕ್ಕರೆಯ ಸಿಹಿ ನಗರ ಬೆಳಗಾವಿಯಲ್ಲಿಂದು ಕನ್ನಡ ನುಡಿಯ ವಿಶ್ವ ಸಮ್ಮೇಳನಕ್ಕೆ ಹರಿದು ಬಂದ ಜನಸಾಗರದಿಂದಾಗಿ ಕರ್ನಾಟಕ ಪರಂಪರೆಯ ಸಾಕ್ಷಾತ್ಕಾರವಾಗಿತ್ತು. ಎಲ್ಲಿ ನೋಡಿದರು ಅಲ್ಲಿ ಕನ್ನಡದ ಡಿಂಡಿಮ, ಬಾವುಟಗಳ ಆರೋಹಣ, ಚೆಲುವ ಜನಪದ ಸಂಸ್ಕೃತಿಯ ಕಲಾ ಶ್ರೀಮಂತಿಕೆಯು ರತ್ನಗಂಬಳಿಯ ನೇಯ್ಗೆಯಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿತು. ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಈ ಕುಂದಾನಗರಿ ಕಂಗೊಳಿಸಿತು. ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೀಡು ಎಂಬುದನ್ನು ಇಂದು ಇಲ್ಲಿ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾದ ಮೆರವಣಿಗೆ ಸಾಬೀತು ಪಡಿಸಿತು.ವಿಶ್ವ ಕನ್ನಡ ಸಮ್ಮೇ ಳನ ಅಂಗ ವಾಗಿ ಬೆಳ ಗಾವಿ ನಗರ ದ ತಿಳಕ ವಾಡಿ ಬಳಿಯ ಐತಿ ಹಾಸಿಕ ಕಾಂಗ್ರೆಸ್ ಬಾವಿಯ ವೀರ ಸೌಧದಿಂದ ಈ ಅದ್ಧೂರಿ ಮೆರವಣಿಗೆ ಪ್ರಾರಂಭಗೊಂಡಿತು. ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ ಅವರು ಮೆರವಣಿಗೆ ಚಾಲನೆ ನೀಡಿದರು. ಮೊದಲು ವೀರ ಸೌಧಕ್ಕೆ ಹೋಗಿ ಗೌರವ ಸರ್ಮ ಪಿಸಿ, ನಂತರ ಮೆರ ವಣಿಗೆ ಯ ಕೀರ್ತಿ ಧ್ವಜಕ್ಕೆ ಪುಷ್ಪ ರ್ಪಾಣೆ ಮಾಡಿ ತಾಯಿ ಭುವ ನೇಶ್ವರಿ ಪ್ರತಿ ಮೆಗೆ ಪೂಜೆ ಸಲ್ಲಿಸುವ ಮೂಲಕ ಈ ಅದ್ಧೂರಿ ಮೆರವ ಣಿಗೆಗೆ ಸಂಭ್ರಮ ದ ಮೆರಗು ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಖಾತೆ ಸಚಿವರಾದ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾದ ಉಮೇಶ ಕತ್ತಿ, ಪಾಲಿಕೆಯ ಮೇಯರ್ ಎನ್. ಬಿ. ನಿರ್ವಾಣಿ, ಜಿಲ್ಲಾಧಿಕಾರಿಡಾ: ಏಕರೂಪ ಕೌರ್, ಶಾಸಕರಾದ ಅಭಯ ಪಾಟೀಲ್, ಸಂಜಯ್ ಪಾಟೀಲ್, ವಾರ್ತಾ ಇಲಾಖೆಯ ನಿರ್ದೆಶಕರಾದ ಡಾ: ಮುದ್ದುಮೋಹನ್ ಹಾಗೂ ಗಣ್ಯರು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಮೈಸೂರಿನ ದಸರಾ ಜಂಬೂ ಸವಾರಿ ಯಲ್ಲಿ ಪಾಲ್ಗೊ ಳ್ಳುವ ಗಜ ರಾಜ ಬಲ ರಾಮ ಆನೆ ತನ್ನ ಅಂಬಾರಿಯ ಮೇಲೆ ತಾಯಿ ಭುವ ನೇಶ್ವರಿ ಮೂರ್ತಿ ಹೊತ್ತು, ರಾಜ ಗಾಂಭೀ ರ್ಯದಿಂದ ಹೆಜ್ಜೆ ಇಡು ತ್ತಿದ್ದಂ ತೆಯೇ ಕನ್ನಡ ಜಯ ಘೋಷ ಗಳು ಮುಗಿಲು ಮುಟ್ಟಿ ದ್ದವು. ಪೂರ್ಣ ಕುಂಭ ಹೊತ್ತ 1001 ವನಿತೆಯರು ಕೀರ್ತಿ ಧ್ವಜದ ಹಿಂದೆ ಸಾಗಿದಾಗ ಕನ್ನಡ ಲೋಕದ ವೈವಿಧ್ಯತೆ ಅನಾವರಣ ಗೊಂಡಿತ್ತು. ಕನ್ನಡ ಧ್ವಜ ಹೊತ್ತ ತರುಣರು ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ. ಎಂಬ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಬಲರಾಮನ ಹಿಂದೆ ಮೈಸೂರಿನಿಂದ ಆಗಮಿಸಿದ ಕೃಷ್ಣ ಆನೆ, ಸಕ್ರೆಬಯಲಿನ 4 ಆನೆಗಳು ಹಾಗೂ ರಾಮದುರ್ಗ ತಾಲ್ಲೂಕಿನ ಚಿಪ್ಪಲಗಟ್ಟಿಯ ಲಕ್ಷ್ಮೀದೇವರ ಮಠದ ಆನೆ (ಸುಧಾ) ಕೂಡ ಅವರೊಂದಿಗೆ ಹೆಜ್ಜೆ ಹಾಕಿ ತಾಯಿ ಭುವನೇಶ್ವರಿಯ ಸಂಪದದ ಸಂಭ್ರಮ ಹೆಚ್ಚಿಸಿದವು.
ಮೆರಣಿಗೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಅಶ್ವರೋಹಿ ದಳದ 12 ಕುದುರೆಗಳು ಮೆರವಣಿಗೆಗೆ ನಾವೀನ್ಯತೆ ತುಂಬಿದರೆ, ಅದರ ಹಿಂದೆ ಆಗಮಿಸಿದ ಕನ್ನಡ ರಕ್ಷಣಾ ವೇದಿಕೆಯವರ 100 ಮೀಟರ್ ಉದ್ದದ ಕನ್ನಡ ಬಾವುಟವನ್ನು ಹಿಡಿದು ಸ್ವಾಭಿಮಾನದ ಸಂಚಲನ ಮೂಡಿಸಿದರು.
ಕನ್ನಡ ಜನಪದ ಲೋಕದ ವೀರಗಾಸೆ, ಪುರುಷ ಮತ್ತು ಮಹಿಳೆಯರ ಡೊಳ್ಳು ಕುಣಿತ, ಪುರವಂತಿಕೆ, ಸೋಮನಕುಣಿತ, ನಂದಿಕೋಲು, ಗೊರವರ ಕುಣಿತ, ಮರಗಾಲು, ಕರಡಿಮಜಲು, ಸಂಬಾಳ, ಲಂಬಾಣಿ ನೃತ್ಯ, ಕುದುರೆ ಕುಣಿತ, ಯಕ್ಷಗಾನದ ವಿಕಟ ಶೈಲಿ ಗೊಂಬೆಗಳು, ಕೀಲು ಕುದುರೆ, ಕರಗ ನೃತ್ಯ, ಬೀಸು ಕಂಸಾಳೆ,
ಮಂಗಳೂರಿನ ಕರಾವಳಿ ತಂಡದ ವನ್ಯ ಪ್ರಾಣಿಗಳ ರೂಪಗಳು, ಹಗಲುವೇಷಗಾರರು, ಜಗ್ಗಲಿಗೆ, ಉಡುಪಿ ಭೂತನೃತ್ಯ, ಕೊಡವರ ಸುಗ್ಗಿ ಕುಣಿತ, ಕರಬನ ಮೇಳ, ಜಾಂಜ್ ಪಥಕ್ ಕಲಾತಂಡಗಳು ಮುಖ್ಯ ಬೀದಿಯತ್ತ ಸಾಗಿಬಂದಾಗ ಮಲೆನಾಡ ಸೆರಗಿನ ಈ ಪಟ್ಟಣದ ಅಂಗಳದಲ್ಲಿ ಬಣ್ಣದ ಲೋಕ ಸೃಷ್ಟಿಯಾಗಿತ್ತು. ದಾರಿಯುದ್ಧಕ್ಕೂ ಲಕ್ಷಾಂತರ ಜನರು ಈ ಮೆರವಣಿಗೆಯ ಐಸಿರಿಯನ್ನು ಕಣ್ಣು ತುಂಬಿಕೊಂಡರು. ಈ ಶೋಭಾಯಾಮಾನ ಮೆರವಣಿಗೆಯ ಸಂಭ್ರಮದಲ್ಲಿ ಕಲಾತಂಡಗಳು ತಮ್ಮ ಕಲೆ ಪ್ರದರ್ಶಿಸಿ ಸಾಗುತ್ತಿದ್ದಯಂತೆಯೇ, ಜನಸ್ತೋಮ ಅಲ್ಲಿಲ್ಲಿ ತಮ್ಮ ಮೊಬೈಲ್ ಕ್ಯಾಮೆರಾ ಹಾಗೂ ವಿಡಿಯೋ ಮೂಲಕ ಈ ಸ್ಮರಣಾರ್ಹ ಕಲಾಕೌಶಲ್ಯವನ್ನು ಕ್ಲಿಕಿಸಿ ಹರ್ಷಚಿತ್ತರಾಗುತ್ತಿರುವುದು ಸಾಮಾನ್ಯ ನೋಟವಾಗಿತ್ತು.
ಕನ್ನಡ ಧ್ವಜ ಹಿಡಿದು ಅಭಿಮಾನದಿಂದ ನರ್ತಿಸುತ್ತಿದ್ದ ಯುವಕರ ತಂಡ ಇಡೀ ಮೆರವಣಿಗೆಗೆ ಕನ್ನಡದ ಕಂಪನ್ನು ತುಂಬಿತು. ಕಾಂಗ್ರೆಸ್ ರಸ್ತೆಯಲ್ಲಿನ ಕಟ್ಟಡಗಳ ಮೇಲಿಂದ ಜನತೆ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದಂತೆ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾವಿದರ ಮೇಲೆ ಪುಷ್ಪಾರ್ಪಣೆಗೈದು ತಮ್ಮ ಅಭಿಮಾನ ತೋರಿದ್ದು, ವಿಶೇಷವಾಗಿತ್ತು.
ಗಜ-ಅಶ್ವಪಡೆ:-
ಕನ್ನಡಾಂಬೆಯ ಈ ವೈಭವದ ಮೆರವಣಿಗೆಗೆ ಶೃಂಗಾರಗೊಂಡ ಗಜ ಹಾಗೂ ಅಶ್ವಪಡೆಗಳ ನಡಿಗೆ ಮೆರವಣಿಗೆಗೆ ಬಲತಂದು ಕೊಟ್ಟಿತು. ಕೊಲ್ಲಾಪುರ ಹಾಗೂ ನರಸೋಬನವಾಡಿಯಿಂದ ಬಂದ ಶ್ವೇತವರ್ಣದ ಅಶ್ವದಳ ಹಾಗೂ ಪೇಟಾ ಧರಿಸಿದ ಅಶ್ವರೋಹಿಗಳು ಹಾಗೂ ಮೈಸೂರಿನ ಅಲಂಕೃತ ಅಶ್ವರೋಹಿ ಪೋಲೀಸ್ ದಳಗಳು ಮೆರವಣಿಗೆಯ ಅಂದವನ್ನು ಹೆಚ್ಚಿಸಿದವು. ಬೆಳಗಾವಿಯ ಪಾಂಗೂಳಗಲ್ಲಿಯ ಜೈನ ಬಸದಿಯ ಪದ್ಮಾವತಿಯ ಬೆಳ್ಳಿ ತೇರು, ಕನ್ನಡಾಂಬೆಯ ಪಲ್ಲಕ್ಕಿ, ಮೆರವಣಿಗೆಯಲ್ಲಿ ಸಾಗಿಬಂದವು. ಅಪಾರ ಸಂಖ್ಯೆಯ ಮಹಿಳೆಯರು ಕನ್ನಡಾಂಬೆಯ ಈ ವೈಭವದ ಯಾತ್ರೆಯಲ್ಲಿ ಪಾಲ್ಗೊಂಡು ಅಬಿಮಾನ ಮೆರೆದರು. ಮೆರವಣಿಗೆಯಲ್ಲಿ 500 ಜನಪದ ಕಲಾತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ವೈಭವ ಪರಿಚಯಿಸುವ ಅಂದವಾದ ಸ್ತಬ್ಧಚಿತ್ರಗಳು, ಹಾಗೂ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಜಿಲ್ಲೆಗಳ ಇತಿಹಾಸ ಪರಂಪರೆ ನೋಟ ಬಿಂಬಿಸುವ ವಿವಿಧ ಜಿಲ್ಲೆಗಳ ಕನ್ನಡ ನುಡಿತೇರುಗಳು ಮೆರವಣಿಯುದ್ಧಕ್ಕೂ ಸಾಗಿ ಬಂದು ಜನಮನ ಸೂರೆಗೊಂಡವು. ನಿರೀಕ್ಷೆಗೂ ಮೀರಿ ಭಾರೀ ಜನಸ್ತೋಮ ತಿಳಕವಾಡಿಯಿಂದ ಗೋಗಟೆ ಸರ್ಕಲ್, ಬೋಗಾರವೆಸ್, ಲಿಂಗರಾಜ ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ, ಸರಕಾರಿ ವೈದ್ಯಕೀಯ ಕಾಲೇಜು ರಸ್ತೆಯ ಮೂಲಕ ಸಾಗಿ ಜಿಲ್ಲಾ ಕ್ರೀಡಾಂಗಣ ತಲುಪಿತು. ಈ ಕಲಾವೈಭವವನ್ನು ರಸ್ತೆಗಳ ಇಕ್ಕೆಲಗಳಲ್ಲಿ ನೆರೆದ ಜನ ಕಟ್ಟಡ, ಗಿಡ ಮರಗಳ ಮೇಲೆ ಕುಳಿತು ಕಣ್ತುಂಬಿಕೊಂಡರು. ಕರ್ನಾಟಕ ಹಾಲು ಮಾರಾಟ ಮಂಡಳ ಬಿಸಿಲಿನ ಬೇಗೆಗೆ ಬಳಲಿದ ಸಾರ್ವಜನಿಕರಿಗೆ ಹಾಗೂ ಕಲಾವಿದರಿಗೆ ತಣ್ಣನೆಯ ನೀರನ್ನು ನೀಡಿ, ಬಾಯಾರಿಕೆಯನ್ನು ತಣಿಸಿತು. ಮೆರವಣಿಗೆ ಶಿಸ್ತುಬದ್ಧವಾಗಿ ಸಾಗಿ ಬರುವುದಕ್ಕೆ ಪೊಲೀಸರು ನೆರವು ನೀಡಿದರು.