Tuesday, October 26, 2010

'ನವೆಂಬರ್ 10ರೊಳಗೆ ರಸ್ತೆ ಹೊಂಡ ಮುಚ್ಚಲು ಗಡುವು'

ಮಂಗಳೂರು, ಅಕ್ಟೋಬರ್.26: ನವೆಂಬರ್ 10ರೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರಸ್ತೆಗಳ ಹೊಂಡಗಳನ್ನು ಮುಚ್ಚಬೇಕೆಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ ರಸ್ತೆಗಳ ತುರ್ತು ದುರಸ್ತಿಗೆ ಸಂಬಂಧಿಸಿ ದಂತೆ ಅಧಿಕಾರಿಗಳ ಸಭೆ ನಡೆಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ರಸ್ತೆಗೆ ಸಂಬಂಧಿಸಿದ ಎಲ್ಲ ಅಧಿಕಾರಿ ಗಳಿಂದ ಸಮಗ್ರ ಮಾಹಿತಿ ಯನ್ನು ಪಡೆದರ ಲ್ಲದೆ ಸ್ಥಳೀಯ, ರಾಜ್ಯ, ಅಂತರ ರಾಜ್ಯವಲ್ಲದೆ, ಹೊರ ದೇಶಗಳಲ್ಲೂ ದಕ್ಷಿಣ ಕನ್ನಡದ ರಸ್ತೆಯ ಬಗ್ಗೆಯೇ ಚರ್ಚೆಯಾಗುತ್ತಿದ್ದು, ರಸ್ತೆಗಳ ಬಗ್ಗೆಗಿನ ದೂರುಗಳಿಂದ ಜನತೆ ರೋಸಿ ಹೋಗಿರುವುದಾಗಿ ಹೇಳಿದರು.
ಅಧಿಕಾರಿಗಳು ಪರಸ್ಪರ ಸಮನ್ವ ಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವೆಂದ ಅವರು, ತುರ್ತಾಗಿ ರಸ್ತೆಗಳ ಹೊಂಡ ಮುಚ್ಚದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು. ಇಂಜಿನಿಯರ್ ಗಳಿಗೆ ಜವಾಬ್ದಾರಿ ವಹಿಸುವ ಹಾಗೂ ಸ್ಥಳ ಪರಿಶೀಲನೆ ನಡೆಸಲು ಸೂಚನೆಯನ್ನೂ ನೀಡಿದರು. ಇಂದಿನ ಸಭೆಯ ಉದ್ದೇಶ ರಸ್ತೆ ಹೊಂಡ ಮುಚ್ಚು ಏಕೈಕ ಯೋಜನೆ ಯಾಗಿದ್ದು, ಜವಾಬ್ದಾರಿಯಲ್ಲಿ ಲೋಪವೆಸಗದಿರಲು ಆದೇಶಿಸಿ ದರಲ್ಲದೆ ರಸ್ತೆಯ ವ್ಯಾಪ್ತಿ, ಕಾಮಗಾರಿ, ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಜಿಲ್ಲೆಯಲ್ಲಿ ಕಾಮಗಾರಿ ನಿರ್ವಹಿಸಲು ಹಣದ ಅಡಚಣೆಯಿಲ್ಲ ಎಂದ ಅವರು, ಮುಖ್ಯ ಮಂತ್ರಿಗಳು ಮೊನ್ನೆ ಉಡುಪಿಯಲ್ಲಿ ಜಿಲ್ಲೆಗೆ ಇನ್ನೈದು ಕೋಟಿ ನೀಡಿರುವುದನ್ನು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಬಗ್ಗೆಯೂ ಮಾಹಿತಿ ಪಡೆದರು. ಮಹಾನಗರಪಾಲಿಕೆ ಹಣ ಪಡೆಯುವುದರಲ್ಲಿ ಮತ್ತು ವಿನಿಯೋಗದಲ್ಲಿ ಇತರ ಇಲಾಖೆಗಳಿಗೆ ಮಾದರಿಯಾಗಿದ್ದು, ಮುಂದಿನ ವಿಶೇಷ ಅನುದಾನದಲ್ಲಿ ಫುಟ್ ಪಾತ್ ಮತ್ತು ಚರಂಡಿ ಯೋಜನೆ ರೂಪಿಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆದರೆ ತ್ಯಾಜ್ಯ ನಿರ್ವಹಣೆಯಲ್ಲಿ ಪಾಲಿಕೆ ವಿನೂತನ ಸಾಧಿಸಬಹುದು ಎಂದು ಸಲಹೆ ಮಾಡಿದರು.
ಎಲ್ಲ ತಾಲೂಕುಗಳಿಂದ ಮಳೆ ಹಾನಿ ವರದಿ ಶಾಸಕರ ಅನುಮೋದನೆಯೊಂದಿಗೆ ಆದಷ್ಟು ಶೀಘ್ರ ಜಿಲ್ಲಾಧಿಕಾರಿ ಕಚೇರಿಗ ಕಳುಹಿಸುವ ಅಗತ್ಯವನ್ನು ಸಭೆಯಲ್ಲಿ ಪ್ರತಿಪಾದಿಸಿದ ಅವರು, 3 ದಿನದೊಳಗೆ ಸಮಗ್ರ ಮಾಹಿತಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಹೇಳಿದರು. ಶಿರಾಡಿಘಾಟಿ ಕಾರ್ಯವೈಖರಿ, ಟ್ಯಾಂಕರ್, ಟ್ರಕ್ ಗಳ ನಿಷೇಧದಿಂದ ಆದಾಯ ಕೊರತೆ ಉಂಟಾಗಿದೆ. ಆದರೆ ರಸ್ತೆಯ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ ಎಂಬುದರ ಬಗ್ಗೆಯೂ ಸಭೆಯ ಗಮನಸೆಳೆದರು.
ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸ್ವಾಗತಿಸಿದರು, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಪಾಲಿಕೆ ಆಯುಕ್ತರಾದ ಡಾ. ಕೆ.ಎನ್. ವಿಜಯಪ್ರಕಾಶ್, ಸಿಇಒ ಶಿವಶಂಕರ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಾಲಕೃಷ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗೋಸ್ವಾಮಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಟೀಮ್ ಲೀಡರ್ ಜಾರ್ಜ, ಎಲ್ಲ ಸಹಾಯಕ ಕಾರ್ಯಕಾರಿ ಅಭಿಯಂತರರು, ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾಕರ ರಾವ್ ವಂದಿಸಿದರು.