Tuesday, October 26, 2010

ಜಿಲ್ಲಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಮಂಗಳೂರು,ಅ 26: ಜಿಲ್ಲೆಯಲ್ಲಿ ಸಾಧಿಸಿದ ಜನಪರ ಕೆಲಸಗಳು ತಂಡದ ಪ್ರಯತ್ನ ಎಂದು ದಕ್ಷಿಣ ಕನ್ನಡ ಜಿಲ್ಲಾ ನಿರ್ಗಮನ ಜಿಲ್ಲಾಧಿಕಾರಿ ವೇಲುಸ್ವಾಮಿ ಪೊನ್ನುರಾಜ್ ಹೇಳಿದ್ದಾರೆ. ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವರ್ಗಾವಣೆಗೊಂಡು ಶಿವಮೊಗ್ಗಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಮಂಗಳೂರಿನ ರಸ್ತೆಗಳ ಅಭಿವೃದ್ಧಿ ಯಲ್ಲಿ ಮಹಾ ನಗರ ಪಾಲಿಕೆಯ ಅಧಿಕಾ ರಿಗಳ, ಜನ ಪ್ರತಿ ನಿಧಿಗಳ ಪಾಲು ಹೆಚ್ಚಿದೆ. ಆದರೆ ಕ್ರೆಡಿಟ್ ನನಗೆ ಲಭಿಸಿದೆ. ಹೆಚ್ಚಿನ ಕೆಲಸ ಕಾರ್ಯ ಗಳಲ್ಲಿ ನಾನು ನೆಪ ಮಾತ್ರ. ಅಧಿಕಾರಿಗಳ, ಜನಪ್ರತಿನಿಧಿಗಳ, ಜನತೆಯ ಸಹಕಾರದ ಹೊರತಾಗಿ ಯಾರೂ ಏನೂ ಮಾಡಲು ಸಾಧ್ಯವಾಗದು ಎಂದು ಪೊನ್ನುರಾಜ್ ನುಡಿದರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನನ್ನೊಂದಿಗೆ ಕೈ ಜೋಡಿಸಿದ ನಿಕಟಪೂರ್ವ ಐಜಿಪಿ ಗೋಪಾಲ ಹೊಸೂರು ಹಾಗೂ ಹಾಗೂ ಎಸ್ಪಿ ಡಾ| ಎ.ಎಸ್. ರಾವ್ ಅವರ ಸಹಕಾರವನ್ನು ಮರೆಯಲಾಗದು. ಜಿಲ್ಲೆ ಇನ್ನಷ್ಟು ಬೆಳೆಯಬೇಕಾಗಿದೆ. ಅದಕ್ಕೆ ತಕ್ಕುದಾದ ವಾತಾವರಣವಿದೆ ಎಂದು ಅವರು ಹೇಳಿದರು.ಇದೇ ವೇಳೆ ನೂತನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರನ್ನು ಸ್ವಾಗತಿಸಲಾಯಿತು. ಈ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲರ ಮಾತು ಕೇಳಿಸಿದ ಬಳಿಕ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾದೀತೆ ಎಂಬ ಶಂಕೆ ವ್ಯಕ್ತವಾಗತೊಡಗಿದೆ ಎಂದು ಸುಬೋಧ್ ಯಾದವ್ ಅಭಿಪ್ರಾಯಿಸಿದರು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಿಲ್ಲೆ ಪ್ರಗತಿಪಥದಲ್ಲಿ ಸಾಗುವುದು ಖಚಿತ ಎಂದು ಸುಬೋಧ್ ಯಾದವ್ ನುಡಿದರು.
ಉಪ ಪೊಲೀಸ್ ಆಯುಕ್ತ ಆರ್. ರಮೇಶ್ ಮಾತನಾಡಿದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಲೋಕೋಪಯೋಗಿ ಇಲಾಖೆಯ ಸುಪರಿಂಟೆಂಡಿಂಗ್ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣ , ಮನಪಾ ಆಯುಕ್ತ ಡಾ.ವಿಜಯಪ್ರಕಾಶ್ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಪಂಚಾಯತ್ ಸಿಇಒ ಅಧಿಕಾರಿ ಪಿ.ಶಿವಶಂಕರ್, ಹೊಸದರಲ್ಲಿ ಅಧಿಕಾರಿಗಳಿಗೆ ಅನೇಕರು ಸ್ನೇಹಿತರಾಗುತ್ತಾರೆ. ಅವರು ವರ್ಗಗೊಳ್ಳುವ ಸಂದರ್ಭ ವೈರಿಗಳು ಜಾಸ್ತಿಯಾಗುತ್ತಾರೆ. ಆದರೆ ಪೊನ್ನುರಾಜ್ ಮಟ್ಟಿಗೆ ಇದು ಸುಳ್ಳಾಗಿದೆ. ಜಿಲ್ಲೆಯ ಜನತೆಯ ಪಾಲಿಗೆ ಅವರೊಬ್ಬ ಅಜಾತಶತ್ರುವಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಪೊನ್ನುರಾಜ್ ಅವರಿಗೆ ಪುಷ್ಪಗುಚ್ಚ ನೀಡಿ ಶುಭಕೋರಿದರು. ಪತ್ನಿ, ಉಡುಪಿ ಜಿಲ್ಲಾಧಿಕಾರಿ ಪಿ.ಹೇಮಲತಾ ಜತೆಗಿದ್ದರು. ಹೆಚ್ಚುವರಿ ಎಸ್ಪಿ ಎಂ.ಪ್ರಭಾಕರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಐಎಎಸ್ ಪ್ರೊಬೆಶನರಿ ರೋಹಿಣಿ ಸಿಂಧೂರಿ ದಾಸರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ ಸ್ವಾಗತಿಸಿದರು. ಪುತ್ತೂರು ವಿಭಾಗ ಸಹಾಯಕ ಕಮಿಷನರ್ ಡಾ.ಹರೀಶ್ ಕುಮಾರ್ ವಂದಿಸಿದರು.