Tuesday, July 21, 2009

ಆರೋಗ್ಯವಂತ ಸಮಾಜಕ್ಕೆ ಮಾಲಿನ್ಯರಹಿತ ಪರಿಸರ


ಮಂಗಳೂರು, ಜು.21: ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಕು.ಭಾಗೀರಥಿ ಹೇಳಿದರು.
ಸೋಮವಾರ ಸುಳ್ಯದ ಐವರ್ನಾಡಿನ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ವಾರ್ತಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಾಂಕ್ರಾಮಿಕ ರೋಗ ಮತ್ತು ಸ್ವಚ್ಛತೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪರಿಸರ ಮಾಲಿನ್ಯದಿಂದ ಪ್ರಸಕ್ತ ಸಂದರ್ಭದಲ್ಲಿ ಬಹಳಷ್ಟು ಮಾರಕವಾದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.ಎಲ್ಲರ ಮನೆಯಲ್ಲೂ ಶೌಚಾಲಯ ನಿರ್ಮಿಸಲು ಸಲಹೆ ಮಾಡಿದ ಅವರು,ಆರೋಗ್ಯವಂತ ಸಮಾಜಕ್ಕೆ ಮಾಲಿನ್ಯ ರಹಿತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕೆಂದರು.ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿ. ಪಂ. ಯೋಜನಾಧಿಕಾರಿ ಶ್ರೀ ತಾಕತ್ ರಾವ್ ಅವರು, ಕಳೆದ 25 ವರ್ಷಗಳಿಂದ ಶೌಚಾಲಯದ ಅಗತ್ಯದ ಬಗ್ಗೆ ಹೇಳುತ್ತಾ ಬಂದಿದ್ದರೂ ಗ್ರಾಮೀಣ ಪರಿಸರದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯಾಗಿಲ್ಲ ಎಂದು ವಿಷಾದಿಸಿದರು. 2005 ಅಕ್ಟೋಬರ್ 2ರ ಗಾಂಧೀಜಯಂತಿಯಂದು ಆರಂಭಿಸಿದ ಸ್ವಚ್ಚತಾ ಆಂದೋಲನ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಂಬಂಧ ಒಂದು ನೂತನ ಅಧ್ಯಾಯವನ್ನೇ ಆರಂಭಿಸಿದ್ದು, ಜನರ ಸಹಭಾಗಿತ್ವದಿಂದ ಸ್ವಚ್ಛತಾ ಆಂದೋಲನ ಯಶಸ್ವಿಯಾಯಿತು ಎಂದು ಅಭಿಪ್ರಾಯಪಟ್ಟರು. ದ.ಕ.ಜಿಲ್ಲೆಯಲ್ಲಿ 3 ವರ್ಷದೊಳಗೆ 95,000 ಶೌಚಾಲಯ ನಿರ್ಮಾಣಗೊಂಡಿದ್ದು, ಜಿಲ್ಲೆಯು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿ ಘೋಷಿಸಲ್ಪಡಲು ಸುಳ್ಯ ತಾಲೂಕಿನ ಜನರ ಸಹಕಾರ ಅಗತ್ಯ ಎಂದರು. ಸುಳ್ಯದ 12 ಗ್ರಾಮಪಂಚಾಯಿತಿಗಳಲ್ಲಿ ಸ್ವಚ್ಛತಾ ಆಂದೋಲನ ನಿಗದಿತ ಗುರಿ ಸಾಧಿಸಿಲ್ಲ ಎಂದ ಅವರು, ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.
ವಿಷಯದ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಉಪನ್ಯಾಸ ನೀಡಿದರು.ಐವರ್ನಾಡು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಶ್ರೀ ಕೃಷ್ಣಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು.ಸಹಕಾರಿ ಬ್ಯಾಂಕಿನ ಅಧ್ಯಕ್ಷ ಚಂದ್ರ ಕೊಳ್ಚಾರ್, ವೈದ್ಯಾಧಿಕಾರಿ ಜಯಪ್ರಕಾಶ್, ತಾ. ಪಂ.ಸದಸ್ಯರಾದ ವೀಣಾ ಮೋಂಟಡ್ಕ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು.ಪಂಚಾಯಿತಿ ಕಾರ್ಯದರ್ಶಿ ನಾರಾಯಣಗೌಡ ವಂದಿಸಿದರು.