Thursday, July 23, 2009

ತೈಲ ಸೋರಿಕೆ ತಡೆ ವಿಳಂಬ ನೀತಿಗೆ ಜಿಲ್ಲಾಧಿಕಾರಿ ಅಸಮಾಧಾನ

ಮಂಗಳೂರು,ಜು.23:ಇತ್ತೀಚೆಗೆ ಪಣಂಬೂರು ಬಳಿ ಸಮುದ್ರದಲ್ಲಿ ಮುಳುಗಿದ ಹಾಂಗ್ ಕಾಂಗ್ ಮೂಲದ ಹಡಗು ಎಂ ವಿ ಏಷಿಯನ್ ಫಾರೆಸ್ಟ್ ಹಡಗಿನೊಳಗೆ ಇರುವ ಕಚ್ಚಾತೈಲ (ಇಂಧನ) ಹೊರತೆಗೆಯದಿದ್ದರೆ ಸಮುದ್ರ ಕಲುಷಿತಗೊಳ್ಳುವುದರಿಂದ ಹಡಗಿನ ಮಾಲೀಕರು ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದರು.
ಈ ಸಂಬಂಧ 22ರಂದು ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಹಡಗು ಮುಳುಗಿ ಸಂಭವಿಸಲಿರುವ ಅಪಾಯದ ಬಗ್ಗೆ ಚರ್ಚಿ ಸಲಾಯಿತು. ಹಡಗು ಮುಳುಗಿ 5 ದಿನಗಳಾಗಿದ್ದು, ಮುಂದಿನ ಕ್ರಮದ ಬಗ್ಗೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಡಗಿನ ಮಾಲೀಕರು ಕೈಗೊಳ್ಳುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿಯನ್ನು ಪಡೆದರಲ್ಲದೆ; ಈ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸದಿದ್ದರೆ ಹಡಗು ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.ಮುಳುಗಡೆ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತೈಲ ಸೋರಿಕೆ ತಡೆಯಲು ಮತ್ತು ಹೊರತೆಗೆಯಲು ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ. ಈ ಬಗ್ಗೆ ಮೀನುಗಾರರು ಭಯ ಪಡುವ ಅಗತ್ಯವಿಲ್ಲ ಎಂದು ಶರ್ಮಾ ಅವರು ಹೇಳಿದರು.ಹಡಗಿಗೆ ಜಪಾನಿನ ಪಿ ಆಂಡ್ ಐ ವಿಮಾ ಸಂಸ್ಥೆಯಿಂದ ವಿಮೆ ಮಾಡಿಸಲಾಗಿದ್ದು, ಒಂದು ಬಿಲಿಯನ್ ಡಾಲರ್ ನಷ್ಟು ಪರಿಹಾರನ್ನು ಕೋರಬಹುದಾಗಿದೆ. ಸಮುದ್ರದಲ್ಲಿರುವ ಜಲಚರಗಳನ್ನು ರಕ್ಷಿಸುವ ಕೆಲಸ ಅತ್ಯಗತ್ಯವಾಗಿದ್ದು, ಇದರಿಂದ ಮೀನುಗಾರರಿಗೆ, ಪ್ರವಾಸೋದ್ಯಮಕ್ಕೆ ಆಗುವ ನಷ್ಟವನ್ನು ಪಡೆಯಬಹುದಾಗಿದೆ ಎಂದು ನೌಕಾ ಯಾನ ನಿರ್ದೇಶನಾಲಯದ ಮುಖ್ಯಸ್ಥ ಜಾನ್ ಹೇಳಿದರು. ಕೋಸ್ಟ್ ಗಾರ್ಡ್, ಹಡಗಿನ ಮಾಲೀಕರು, ಮತ್ತು ಸಂಬಂಧಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.