Friday, July 24, 2009

ಸಾಮರ್ಥ್ಯ ಮೀರಿ ಶಾಲಾ ಮಕ್ಕಳ ಕೊಂಡೊಯ್ಯುವ ವಾಹನಗಳಿಗೆ ಎಚ್ಚರಿಕೆ

ಮಂಗಳೂರು,ಜು.24: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿ ತಮ್ಮ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿರುವುದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ತಡೆಯಲು ಕಾರ್ಯೋನ್ಮುಖರಾಗಿದ್ದಾರೆ; ಈ ನಿಟ್ಟಿನಲ್ಲಿ ನಿಯಮ ಅನುಷ್ಠಾನಕ್ಕೆ ವಿಶೇಷ ತನಿಖಾ ತಂಡಗಳನ್ನು ನೇಮಿಸಲಾಗಿದೆ.
ಆಟೋರಿಕ್ಷಾ, ಟ್ಯಾಕ್ಷಿ, ಮ್ಯಾಕ್ಷಿಕ್ಯಾಬ್ ಮುಂತಾದ ವಾಹನಗಳಲ್ಲಿ ಪರವಾನಿಗೆಯಲ್ಲಿ ನಮೂದಿಸಿದ ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ಕೊಂಡೊಯ್ಯಲು ಸೂಚಿಸಲಾಗಿದ್ದು, ವಾಹನಗಳಲ್ಲಿ ವಾಹನದ ಮೂಲ ದಾಖಲೆಗಳಾದ ನೋಂದಣಿ ಪತ್ರ, ಅರ್ಹತ ಪತ್ರ, ವಿಮೆ, ಪರವಾನಿಗೆ ಹಾಗೂ ಚಾಲಕರ ಲೈಸನ್ಸ್ ನ್ನು ಇಟ್ಟುಕೊಂಡು ತಪಾಸಣೆ ಕೋರಿದಾಗ ಹಾಜರು ಪಡಿಸಬೇಕು. ತಪ್ಪಿದಲ್ಲಿ ಅಂತಹ ವಾಹನಗಳ ನೋಂದಣಿ ಅಮಾನತು ಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ ಹಾಗೂ ಗರಿಷ್ಠ ದಂಡ ವಿಧಿಸುವುದು, ವಾಹನ ಮತ್ತು ಚಾಲಕನ ಪರವಾನಿಗೆ ರದ್ಧತಿಯಂತಹ ಕ್ರಮಕೈಗೊಳ್ಳ ಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಜೆ ಅವರು ಎಚ್ಚರಿಸಿದ್ದಾರೆ.
ಶಾಲಾ ಮಕ್ಕಳ ಪೋಷಕರು ಕೂಡಾ ಸಾರಿಗೆ ಕಚೇರಿಯಿಂದ ಅಧಿಕೃತ ಪರವಾನಿಗೆ ಪಡೆದಿರುವ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಲಹೆ ಮಾಡಿದ್ದಾರೆ.