Friday, July 31, 2009

ಸ್ತನ್ಯಪಾನ ಮಾತೆಯ ಮಮತೆಯ ಪ್ರತೀಕ

ಮಂಗಳೂರು, ಜು.31:ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದು ಬಹಳ ಉತ್ತಮ. ಮಗುವನ್ನು ತಾಯಿಯ ಅತಿ ಸಮೀಪದಲ್ಲಿ ಮಲಗಿಸಬೇಕು; ಇದರಿಂದ ಮಗುವಿನ ಸುರಕ್ಷತಾ ಭಾವವು ಬಲಗೊಳ್ಳುವುದಲ್ಲದೆ, ಮಗುವಿನ ಸ್ಪರ್ಶ ತಾಯಿಯ ಸ್ತನಗಳಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮಗುವಿಗೆ ಎದೆಹಾಲು ಉಣಿಸುವುದರಿಂದ ಮಗುವಿನ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದರಿಂದ ತಾಯಿಯ ಆರೋಗ್ಯಕ್ಕೂ ಹಿತ.
ಜಿಲ್ಲೆಯ ಎಲ್ಲ ತಾಯಿಯಂದಿರಿಗೆ ಸ್ತನ್ಯಪಾನ ಮಹತ್ವದ ಅರಿವನ್ನು ಮೂಡಿಸಲು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ ಆಗಸ್ಟ್ 1ರಿಂದ 7 ತಾರೀಖಿನವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಮ್ಮಟಗಳನ್ನು ಹಮ್ಮಿಕೊಂಡಿದೆ.
ಈ ಕಮ್ಮಟದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 1 ರಂದು ರೋಶನಿ ನಿಲಯದಲ್ಲಿ ಪೂರ್ವಾಹ್ನ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, 'ಸ್ತನ್ಯಪಾನ: ಜೀವಸಂಬಂಧ ತುರ್ತು ಪ್ರತಿಕ್ರಿಯೆ - ನೀವು ತಯಾರಾಗಿದ್ದೀರಾ?'ಎಂಬ ವಿಷಯದ ಬಗ್ಗೆ ಪರಿಣತರು ಉಪನ್ಯಾಸ ನೀಡಲಿರುವರು. ಕಮ್ಮಟವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ಅವರು ಉದ್ಘಾಟಿಸಲಿರುವರು.
ಆ.3ರಂದು ಕುತ್ತಾರಿನ ಅಂಗನವಾಡಿ ಕೇಂದ್ರದಲ್ಲಿ 11 ಗಂಟೆಗೆ, 4 ರಂದು ಪಾವೂರಿನ ಅಕ್ಷರ ನಗರದ ಅಂಗನವಾಡಿ ಕೇಂದ್ರದಲ್ಲಿ, 5ರಂದು ಪುತ್ತೂರಿನ ನಗರದಲ್ಲಿರುವ ರಾಮಕೃಷ್ಣ ಹೆಣ್ಣುಮಕ್ಕಳ ಶಾಲೆಯಲ್ಲಿ, 6ರಂದು ಉಳ್ಳಾಲದಲ್ಲಿ, 7ರಂದು ಬೆಳ್ತಂಗಡಿಯ ಶಿರ್ಲಾಲುವಿನ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವಾಹ್ನ 11 ಗಂಟೆಗೆ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನ್ಮದಿನದಿಂದ 6 ತಿಂಗಳವರೆಗೆ ತಾಯಿ ಎದೆ ಹಾಲು ಮಾತ್ರ ಉಣಿಸಬೇಕು; ನೀರು ಸೇರಿದಂತೆ ಬೇರೆ ಯಾವ ಆಹಾರವನ್ನೂ ಉಣಿಸಬಾರದು. 6-13 ತಿಂಗಳವರೆಗೆ ಎದೆ ಹಾಲಿನ ಜೊತೆ ಮೆತ್ತನೆ ಆಹಾರ ನೀಡುವುದನ್ನು ಆರಂಭಿಸಬೇಕು. ದಿನಕ್ಕೆ 3 ಬಾರಿಯಂತೆ ಎಣ್ಣೆ/ತುಪ್ಪದಲ್ಲಿ ಬೇಯಿಸಿದ ಬೇಳೆ ಮತ್ತು ಅನ್ನ ಜಜ್ಜಿರುವ ಧಾನ್ಯಗಳ ಜೊತೆ ಹಾಲನ್ನು ಕೊಡಬೇಕು. ಬೇಯಿಸಿದ ಆಲೂಗೆಡ್ಡೆ, ಬಾಳೇಹಣ್ಣು, ಸಪೋಟದಂತಹ ಹಣ್ಣುಗಳನ್ನು ತಿನ್ನಿಸಬೇಕು. ತಿನ್ನಿಸುವ ಕೈಗಳು ಶುಭ್ರವಾಗಿರಬೇಕು; 1-2 ವರ್ಷಗಳಲ್ಲಿ ಎದೆ ಹಾಲಿನ ಜೊತೆ ಮನೆ ಆಹಾರವನ್ನು ಕೊಡಬಹುದು.