
ಮಂಗಳೂರು, ಜು.18:ಕಳೆದ ಎಂಟು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರಿ ಜೆ. ಕೃಷ್ಣ ಪಾಲೇಮಾರ್ ಅವರು ಇಂದು ಮಂಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೀವಹಾನಿ ಮತ್ತು ಆಸ್ತಿ ಹಾನಿ ಸಂಬಂಧ ಈಗಾಗಲೇ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಅಂದಾಜು 25ರಿಂದ 30 ಕೋಟಿ ರೂ.ಗಳ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಸುಮಾರು 385 ಮನೆ, ಮತ್ತು ಕೃಷಿ ಭೂಮಿ ನಾಶವಾಗಿದೆ ಹಾಗೂ ಜೀವಹಾನಿ ಸಂಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನೆರೆ ಪೀಡಿತ ಪ್ರದೇಶಗಳಾದ ಬಂಗ್ರ ಕೂಳೂರು, ಮಾಲಾಡಿ, ಉಳ್ಳಾಲ ವ್ಯಾಪ್ತಿಯ ಪಟ್ಲಾ ಮುಂತಾದೆಡೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರಲ್ಲದೆ 42 ಕಡೆ ಗಂಜಿಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು,ಜನರು ಪ್ರಾಕೃತಿಕ ವಿಕೋಪದ ಮುನ್ಸೂಚನೆ ದೊರೆತ ಸಂದರ್ಭದಲ್ಲಿ ನಿಗದಿತ ಪ್ರದೇಶದಿಂದ ಹೊರಬಂದು ಜಿಲ್ಲಾಡಳಿತ ಕೈಗೊಂಡಿರುವ ಪರ್ಯಾಯ ವ್ಯವಸ್ಥೆಗಳ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ಮನಾಪ ಮೇಯರ್ ಶಂಕರ್ ಭಟ್, ಆಯುಕ್ತ ರಮೇಶ್, ತಹಸೀಲ್ದಾರ್ ರವಿಚಂದ್ರ ನಾಯಕ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.