Wednesday, July 8, 2009

ಶೌಚಾಲಯ ನಿರ್ಮಾಣ ಕಾಮಗಾರಿ ಹೊಣೆ ಗ್ರಾ.ಪಂ. ಕಾರ್ಯದರ್ಶಿಗಳಿಗೆ


ಮಂಗಳೂರು, ಜು.8: ಸ್ವಚ್ಛತೆ ಮತ್ತು ಗ್ರಾಮ ನೈರ್ಮಲ್ಯ ಕೆಲಸಗಳು ಕೇವಲ ಪ್ರಶಸ್ತಿ ಸ್ವೀಕರಿಸುವುದಕ್ಕಷ್ಟೇ ಸೀಮಿತವಾಗಿರದೆ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸಗಳಾಗುತ್ತಿರಬೇಕು; ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ಶಿವಶಂಕರ್ ಅವರು ಹೇಳಿದರು.
ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯ ಬಗ್ಗೆ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನಷ್ಟು ಸಕ್ರಿಯವಾಗಿ ತಮ್ಮನ್ನು ಸ್ವಚ್ಛತಾ ಆಂದೋಲನದಲ್ಲಿ ತೊಡಗಿಕೊಳ್ಳಬೇಕು; ಈ ಕುರಿತ ಮಾಹಿತಿ ಅವರ ಬಳಿಯೇ ಅಲಭ್ಯವಾದರೆ ಅಮಾನತಿನಂತಹ ಕಠಿಣ ಕ್ರಮಕ್ಕೂ ಹಿಂಜರಿಯಲಾರೆ ಎಂದು ಎಚ್ಚರಿಕೆ ನೀಡಿದರು.
ಸ್ವಚ್ಚತಾ ಆಂದೋಲನ ಪ್ರಾಥಮಿಕ ಹಂತದ ಕಾವನ್ನು ಕಳೆದುಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಆಂದೋಲನ ನಿರಂತರವಾಗಿರಬೇಕು ಎಂದು ಸೂಚಿಸಿದ ಅವರು, ಎಲ್ಲಾ ಅಧಿಕಾರಿಗಳ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದರು.
ಕಳೆದ ಬಾರಿ ಪ್ರಶಸ್ತಿ ಪಡೆಯುವಲ್ಲಿ ಸೋತ ಕಾರಣದ ಬಗ್ಗೆ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ ಅವರು, ನಿರ್ಮಲ ಗ್ರಾಮ ಪುರಸ್ಕಾರವನ್ನು ಇದುವರೆಗೆ 182 ಗ್ರಾಮ ಪಂಚಾಯಿತಿಗಳು ಪಡೆದಿದ್ದು, ಉಳಿದ 21 ಗ್ರಾಮಪಂಚಾಯಿತಿಗಳು ಪ್ರಸಕ್ತ ಸಾಲಿನ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿವೆ. ಈ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಅದರಲ್ಲೂ ಮುಖ್ಯವಾಗಿ ಧರೆಗುಡ್ಡೆ ಗ್ರಾಮಪಂಚಾಯಿತಿ ಕಾರ್ಯದರ್ಶಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿ ಇ ಒ ಅವರು ಕನಿಷ್ಠ ಮಾಹಿತಿ ನೀಡುವಲ್ಲೂ ಸುಳ್ಳು ಹೇಳಿದರೆ ಅಮಾನತಿನಂತಹ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಸ್ವಚ್ಚತೆಯ ಬಗ್ಗೆ ಸಮಗ್ರ ಮಾಹಿತಿಗಾಗಿ ಗೋಡೆಬರಹಗಳಿಗೆ 5,000 ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ ಅವರು, ಶಿಕ್ಷಣ ಇಲಾಖೆ ಪಾತ್ರ ಈ ಆಂದೋಲನದಲ್ಲಿ ಪ್ರಮುಖವಾಗಿದ್ದು, ಇಲಾಖೆ ಪಾತ್ರ ನಗಣ್ಯವಾಗಿದೆ ಎಂದ ಅವರು, ಶೌಚಾಲಯ ಬಳಕೆಯ ವಿಷಯದಲ್ಲಿ ಶಿಕ್ಷಕರು ಮಕ್ಕಳಿಗೆ ಸಾಕಷ್ಟು ಮಾಹಿತಿಯನ್ನು ನೀಡಬೇಕಾದ ಅಗತ್ಯವಿದ್ದು, ಸಕ್ರಿಯವಾಗಿ ಇಲಾಖೆಯ ಪಾಲ್ಗೊಳ್ಳುವಿಕೆ ಅಗತ್ಯವನ್ನು ಒತ್ತಿಹೇಳಿದರು. ವಾರ್ಡ್ ಸಮಿತಿಗಳನ್ನು ಬಲಪಡಿಸುವಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ನೀರು ಮತ್ತು ನೈರ್ಮಲ್ಯ ಸಮಿತಿಯ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯರು ಮಾತನಾಡಿ, ಸ್ವಚ್ಛತಾ ಆಂದೋಲನದ ಅಗತ್ಯವನ್ನು ವಿವರಿಸಿದರು. ಸಭೆಯಲ್ಲಿ 21 ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ತಮ್ಮ ಗ್ರಾಮಗಳಿಗೆ ಸಂಬಂಧಿಸಿದ ಶೌಚಾಲಯ ಮತ್ತು ಸ್ವಚ್ಛತೆಯ ಮಾಹಿತಿಯನ್ನು ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರು ಉಪಸ್ಥಿತರಿದ್ದರು. ಇಲಾಖೆಯ ಅಧಿಕಾರಿಗಳು, ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.