Thursday, July 30, 2009

ಏಶಿಯನ್ ಫಾರೆಸ್ಟ್: ಮುಂಜಾಗ್ರತಾ ಕ್ರಮ

ಮಂಗಳೂರು, ಜು.29:ಜುಲೈ 18ರಂದು ಪಣಂಬೂರು ಬಳಿ ಮುಳುಗಡೆಯಾದ ಎಂ.ವಿ. ಏಶಿಯನ್ ಫಾರೆಸ್ಟ್ ಹಡಗಿನ ಕುರಿತ ತನಿಖೆಗೆ ಭಾರತದ ಶಿಪ್ಪಿಂಗ್ ವಿಭಾಗದ ಮಹಾ ನಿರ್ದೇಶಕರು ತನಿಖಾಧಿಕಾರಿಯನ್ನು ನೇಮಿಸಿದ್ದು, ಮುಳುಗಿದ ಹಡಗಿನಿಂದ ತೈಲ ಸೋರಿ ಸಮುದ್ರ ಕಲುಷಿತಗೊಳ್ಳದಂತೆ ತೈಲ ಹೊರತೆಗೆಯಲು ಜಪಾನಿನ ಪಿ ಅಂಡ್ ಐ ಸಂಸ್ಥೆಯ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಸೂಚನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮುಳುಗಡೆಯಾದ ಹಡಗಿನಲ್ಲಿ 400 ಮೆಟ್ರಿಕ್ ಟನ್ ತೈಲವಿದ್ದು ಸೋರಿಕೆ ತಡೆಗೆ ಭಾರತ ಶಿಪ್ಪಿಂಗ್ ವಿಭಾಗದ ನಿರ್ದೇಶಕ ಹಾಗೂ ಹಡಗಿನ ಮಾಲಕರಾದ ಶೈನಿಂಗ್ ಓಶಿಯನ್ ಲಿಮಿಟೆಡ್ ಹಾಂಕಾಂಗ್ ಹಾಗೂ ಕಾರ್ಯಾಚರಣೆ ನಡೆಸಲು ಆಸಕ್ತರಾಗಿರುವ ಪಿ ಆಂಡ್ ಐ ಸಂಸ್ಥೆಯ ಪ್ರತಿನಿಧಿಗಳು ಮುಂಬೈನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಕರಾವಳಿ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಇರುವುದರಿಂದ ತುರ್ತು ಕಾರ್ಯಾಚರಣೆಗೆ ಅಡಚಣೆ ಉಂಟಾಗಿದ್ದು, ಮಳೆಯ ಅಬ್ಬರ ಕಡಿಮೆಯಾದ ಬಳಿಕ ಮುಳುಗಡೆಯಾದ ಹಡಗಿನಿಂದ ತೈಲವನ್ನು ಹೊರತೆಗೆಯುವ ಬಗ್ಗೆ ಕಾರ್ಯಾಚರಣೆ ಆರಂಭವಾಗಲಿದೆ.ಎರಡು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಮುಳುಗಡೆಯಾದ ದಕ್ಷಿಣ ಆಫ್ರಿಕದ ಡೆನ್ ಡೆನ್ ಹಡಗಿನ ಅವಶೇಷಗಳನ್ನು ಮೇಲೆತ್ತುವ ಕುರಿತು ಹಡಗಿನ ಮಾಲಕರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಮಂಗಳೂರು ಕಡಲ ತೀರದಿಂದ 5.8 ನಾಟೆಕಲ್ ಮೈಲು ದೂರದಲ್ಲಿ ಮುಳುಗಡೆಯಾದ ಹಡಗು 20 ಮೀಟರ್ ಆಳದಲ್ಲಿ ಸಾಗರ ತಳ ಸೇರಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಸಂಚರಿಸುವ ಹಡಗುಗಳಿಗೆ ತೊಂದರೆಯಾಗದಂತೆ ಹಡಗು ಮುಳುಗಡೆಯಾದ ಪ್ರದೇಶದಲ್ಲಿ ನಿಯೋಜಿತ ನೌಕೆಯೊಂದಿಗೆ ನಾಲ್ಕು ದಿಕ್ಕುಗಳಲ್ಲಿ ಗುರುತುಗಳನ್ನು ಅಳವಡಿಸಲಾಗುವುದು ಎಂದು ಕೋಸ್ಟ ಗಾರ್ಡ್ ಕಮಾಂಡರ್ ಪಿ ಎಸ್ ಝಾ ತಿಳಿಸಿದರು. ಗೋಷ್ಠಿಯಲ್ಲಿ ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಸುರೇಶ್ ಕುಮಾರ್, ಏಶಿಯನ್ ಫಾರೆಸ್ಟ್ ಹಡಗಿನ ಮಾಲಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.