Thursday, July 12, 2012

ಆಹಾರ ಕಲಬೆರೆಕೆ ತಡೆಗೆ ಕಟ್ಟುನಿಟ್ಟಿನ ಕಾನೂನು: ಅಪರ ಜಿಲ್ಲಾಧಿಕಾರಿ

ಮಂಗಳೂರು, ಜುಲೈ.12: ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆಯಡಿ(The Food Safety and Standards Authority of India) ಆಹಾರ ಕಲಬೆರಕೆಯನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕಾನೂನು ಜಾರಿಯಾಗಿದ್ದು, ಸಂಬಂಧಪಟ್ಟವರು ಆಗಸ್ಟ್ 4, 2012ರೊಳಗಾಗಿ ತಮ್ಮ ವ್ಯವಹಾರಗಳ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿ/ ಜಿಲ್ಲಾ ಸರ್ವೇಕ್ಷಣಾ ಘಟಕ ಕಚೇರಿಯಲ್ಲಿ ನೋಂದಾಯಿಸಬೇಕೆಂದು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕೆ. ದಯಾನಂದ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಿತಿಯ ನ್ಯಾಯನಿರ್ಣಯ ಅಧಿಕಾರಿಗಳೂ ಆಗಿರುವ ಅಪರ ಜಿಲ್ಲಾಧಿಕಾರಿಗಳು, ಈ ಸಂಬಂಧ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅತ್ಯಂತ ಪರಿಣಾಮಕಾರಿ ಕಾಯಿದೆ ಇದಾಗಿದ್ದು, ಆಗಸ್ಟ್ 4 ರೊಳಗೆ ಈ ಸಂಬಂಧ ತಿಳುವಳಿಕೆ ಮೂಡಿಸಿ ನೋಂದಾಯಿಸುವ ಕಾರ್ಯಕ್ಕೆ ಈಗಾಗಲೇ ವಿವಿಧ ಹಂತಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಆಹಾರ ಸುರಕ್ಷತೆ ಅಧಿಕಾರಿಗಳ ಸರ್ಟಿಫಿಕೇಟ್ ಇಲ್ಲದೆ ಯಾವುದೇ ವ್ಯಾಪಾರಕ್ಕೆ ಪರವಾನಿಗೆ (ಟ್ರೇಡ್ ಲೈಸನ್ಸ್) ನೀಡಲಾಗುವುದಿಲ್ಲ ಎಂಬ ನಿಯಮವನ್ನು ಅಳವಡಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರು ಹೇಳಿದರು.
ಈ ಸಂಬಂಧ ಎಲ್ಲ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಹಣ್ಣು ತರಕಾರಿ ಮಾರುವವರು ಆಹಾರಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆಯಡಿ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ ರಾಜೇಶ್, ವೆನ್ ಲಾಕ್ ಆಸ್ಪತ್ರೆ ಹಿಂಭಾಗ, ರೈಲ್ವೇ ಸ್ಟೇಷನ್ ರಸ್ತೆ, ಐಎಂಎ ಎದುರಿನಲ್ಲಿರುವ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಮಂಗಳೂರು, ಬೆಳ್ತಂಗಡಿ ವ್ಯಾಪ್ತಿಗೆ ಆಹಾರ ಸುರಕ್ಷತಾ ಅಧಿಕಾರಿಯಾಗಿ ಸುರೇಶ್ ಅವರು ಕರ್ತವ್ಯ ನಿರ್ವಹಿಸಲಿದ್ದು ಅವರ ಮೊಬೈಲ್ 9448744168, ಬಂಟ್ವಾಳ, ಪುತ್ತೂರು, ಸುಳ್ಯ ವ್ಯಾಪ್ತಿಗೆ ದಯಾನಂದ ಅವರು ಆಹಾರ ಸುರಕ್ಷತಾ ಅಧಿಕಾರಿಯಾಗಿರುವರು. ಇವರ ಮೊಬೈಲ್ 9886568180 ಈ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಕಾನೂನು ಉಲ್ಲಂಘಿಸಿದವರಿಗೆ 6 ತಿಂಗಳ ಜೈಲುವಾಸ, ಒಂದು ಲಕ್ಷ ರೂ. ದಂಡದಿಂದ 10 ಲಕ್ಷದವರೆಗೆ ದಂಡ, ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಆಹಾರ ಸುರಕ್ಷತೆ ಮತ್ತು ಮಾನಕಗಳ ಕಾಯಿದೆ, 2006 ಜಾರಿಗೆ ಬಂದ ಬಳಿಕ ಆಹಾರ ಕಲಬೆರಕೆ ತಡೆಗಟ್ಟುವಿಕೆ ಕಾಯಿದೆ, 1954, ಹಣ್ಣು ಹಂಪಲುಗಳ ಆದೇಶ 1995, ಮಾಂಸಾಹಾರ ಉತ್ಪನ್ನಗಳ ಆದೇಶ 1973, ತರಕಾರಿ ಎಣ್ಣೆಗಳ (ನಿಯಂತ್ರಣ) ಕಾಯಿದೆ, 1947, ಖಾದ್ಯ ತೈಲಗಳ ಪ್ಯಾಕೇಜಿಂಗ್ (ನಿಯಮಾವಳಿ) ಕಾಯಿದೆ, 1988, ಸಾಲ್ವೆಂಟ್ ಎಕ್ಸ್ ಟ್ರಾಕ್ಟೆಡ್, ಡೀ ಆಯಿಲ್ಡ್ ಮೀಲ್ ಮತ್ತು ಎಡಿಬಲ್ ಫ್ಲೋರ್ (ನಿಯಂತ್ರಣ) ಆದೇಶ, 1967, ಹಾಲು ಮತ್ತು ಹಾಲು ಉತ್ಪನ್ನಗಳ ಆದೇಶ 1992, ಮೊದಲಾದ ಅನೇಕ ಕೇಂದ್ರೀಯ ಕಾನೂನುಗಳನ್ನು ರದ್ದುಪಡಿಸಿ ಒಂದೇ ಪ್ರಬಲ ಮತ್ತು ಪರಿಣಾಮಕಾರಿಯಾದ ಕಾನೂನನ್ನು ರೂಪಿಸಲಾಗಿದೆ.
ಆಹಾರ ಸುರಕ್ಷತೆಗಳ ಕಾಯಿದೆ, 2006 ರ ಅನ್ವಯ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನಕಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಆಹಾರಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಇದುವರೆಗೆ ಸರಕಾರದ ಅನೇಕ ಮಂತ್ರಾಲಯಗಳು ಮತ್ತು ಇಲಾಖೆಗಳಲ್ಲಿದ್ದ ಹಲವಾರು ಕಾನೂನುಗಳು ಮತ್ತು ಆದೇಶಗಳನ್ನು ಒಂದುಗೂಡಿಸಿ ಈ ಕಾಯಿದೆಯನ್ನು ರೂಪಿಸಲಾಗಿದೆ.
ಮಾನವನ ಬಳಕೆಗೆ ಸುರಕ್ಷಿತವಾದ ಮತ್ತು ಸಂಪೂರ್ಣವಾದ ಆಹಾರಗಳು ಲಭ್ಯವಾಗುವುದನ್ನು ಖಚಿತಪಡಿಸುವುದಕ್ಕಾಗಿ ಆಹಾರ ಪದಾರ್ಥಗಳಿಗೆ ವಿಜ್ಞಾನ ಆಧಾರಿತವಾದ ಮಾನಕಗಳನ್ನು ತಯಾರು ಪಡಿಸಲು ಹಾಗೂ ಅವುಗಳ ಉತ್ಪಾದನೆ, ದಾಸ್ತಾನು, ವಿತರಣೆ, ಮಾರಾಟ ಮತ್ತು ಆಮದುಗಳನ್ನು ನಿಯಂತ್ರಿಸುವುದಕ್ಕಾಗಿ ಕಾನೂನುಗಳನ್ನು ರೂಪಿಸುವುದಕ್ಕಾಗಿ ಪ್ರಾಧಿಕಾರ ರಚನೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳು ನ್ಯಾಯನಿರ್ಣಯ ಅಧಿಕಾರಿಗಳಾಗಿರುತ್ತಾರೆ. ಬೇಳೆ ಕಾಳು, ಬೇಕರಿ ತಿನಿಸು, ನೀರು, ಹಾಲು, ಮನೆಯಲ್ಲಿ ತಯಾರಿಸುವ ಗೃಹೋತ್ಪನ್ನ ಆಹಾರ ವಸ್ತುಗಳು ಈ ಕಾಯಿದೆಯಡಿ ಒಳಪಡು ವುದರಿಂದ ಆಹಾರ ಸುರಕ್ಷತೆ ಅಧಿಕಾರಿಯಿಂದ ಸರ್ಟಿಫಿಕೇಟ್ ಪಡೆಯುವುದು ಅನಿವಾರ್ಯ ಎಂದು ದಯಾನಂದ ತಿಳಿಸಿದರು.
ಸರಕಾರದ ಪಡಿತರ ಅಂಗಡಿ, ಬಿಸಿಯೂಟ, ಅಂಗನವಾಡಿಗಳಲ್ಲಿ ಆಹಾರ ಪೂರೈಕೆ, ಬಿಸಿಎಂ ಹಾಸ್ಟೆಲ್ ಗಳಲ್ಲಿಯ ಆಹಾರ ಪೂರೈಕೆಯೂ ಈ ಕಾನೂನಿನ ವ್ಯಾಪ್ತಿಗೆ ಬರಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಪಾಲಿಕೆ ಆಯುಕ್ತರು ಕಾನೂನು ಜಾರಿಗೆ ಪಾಲಿಕೆ ಎಲ್ಲ ಸಹಕಾರ ನೀಡಲಿದೆ ಎಂದರು. ಡಾ. ರಾಜೇಶ್, ಡಿ ಎಚ್ ಒ ಓ.ಶ್ರೀರಂಗಪ್ಪ ಮತ್ತು ಸಂಬಂಧ ಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.