Thursday, July 19, 2012

ಎಚ್ ಐ ವಿ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವಿಶೇಷ ಅಭಿಯಾನ: ಡಾ ಕಿಶೋರ್

ಮಂಗಳೂರು, ಜುಲೈ.19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ ಐ ವಿ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪ್ರದೇಶಗಳಲ್ಲಿ ಹೆಚ್ ಐ ವಿ ಸೋಂಕು ವರದಿಯಾಗುತ್ತಿದ್ದು, ಬಹುತೇಕ ವಲಸಿಗರು ವಾಸಿಸುವ ಪ್ರದೇಶದಲ್ಲಿ ಪತ್ತೆಯಾಗುತ್ತಿದೆ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಘಟಕದ ಡಾ. ಕಿಶೋರ್ ಅವರು ಹೇಳಿದರು.
ಮಂಗಳೂರಿನಲ್ಲಿ ಜನವರಿ 12ರಿಂದ ಜೂನ್ 12ರವರೆಗೆ ಮಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ 156 ಪ್ರಕರಣಗಳು ಪತ್ತೆಯಾಗಿದೆ ಎಂದ ಅವರು, ಬಂಟ್ವಾಳದಲ್ಲಿ 38, ಬೆಳ್ತಂಗಡಿಯಲ್ಲಿ 27, ಪುತ್ತೂರಿನಲ್ಲಿ 22, ಸುಳ್ಯದಲ್ಲಿ 14, ಉಡುಪಿಯಲ್ಲಿ 27, ಕಾಸರಗೋಡಿನಲ್ಲಿ 24 ಇತರ ಜಿಲ್ಲೆಗಳು 96, ಇತರ ರಾಜ್ಯದವರು 48 ಒಟ್ಟು 452 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಇವರಲ್ಲಿ ಪುರುಷರು 279, ಮಹಿಳೆಯರು 173 ಎಂದು ಡಾಕ್ಟರ್ ಕಿಶೋರ್ ಮಾಹಿತಿ ನೀಡಿದರು.
ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವಜನಾಂಗದಲ್ಲಿ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಂಬಂಧ ನ್ಯಾಕೋ ಮತ್ತು ಡ್ಯಾಪ್ಕೊದ ಸಹಕಾರದಿಂದ ವಿಶೇಷ ಅಭಿಯಾನ ಆಯೋಜಿಸುತ್ತಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಎ ಆರ್ ಟಿ ಚಿಕಿತ್ಸೆ ಪಡೆಯುತ್ತಿರುವರು 2006 ರಿಂದ ಜೂನ್ 2012ರವರೆಗೆ ಪುರುಷರು 2116, ಮಹಿಳೆಯರು 1299, ಮಕ್ಕಳು 278 ಒಟ್ಟು 3693. ಈ ಸಂಬಂಧ ಚಿಕಿತ್ಸೆ ಹಾಗೂ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಬಹಳ ದೊಡ್ಡ ಸವಾಲು ಗೌಪ್ಯತೆಯನ್ನು ಕಾಪಾಡುವುದು. ಹೀಗಾಗಿ ಹಲವು ಸಂದರ್ಭಗಳಲ್ಲಿ ಇಲಾಖೆಗಳು ಮುಂದೆ ಬಂದರೂ ಫಲಾನುಭವಿಗಳು ದೊರೆಯುವುದು ಕಷ್ಟ ಎಂದ ಡಾ ಕಿಶೋರ್, ಆದರೂ ಜಿಲ್ಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿನೂತನ ಪ್ರಯತ್ನ ಸಾಗಿದ್ದು, ವಸತಿ ಯೋಜನೆ, ಬಿಪಿಎಲ್ ಕಾಡರ್್ ವಿತರಣೆ ಮತ್ತು ಸ್ವಉದ್ಯೋಗ ನೆರವು ನೀಡುವಲ್ಲಿ ಮುಂದಡಿ ಇಡಲಾಗಿದ್ದು, ಎಲ್ಲ ಇಲಾಖೆಗಳಿಂದ ನೆರವು ನೀಡಲು ಶ್ರಮಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೇವಲ ಹೆಚ್ ಐ ವಿ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮ ಮಾತ್ರವಲ್ಲದೆ, ಹೆಚ್ ಐ ವಿ ಸೋಂಕಿತರಿಗೆ/ಬಾಧಿತರಿಗೆ ಮತ್ತು ಲೈಂಗಿಕ ಕಾರ್ಯಕರ್ತರಿಗೆ ಸಾಮಾಜಿಕ ಸವಲತ್ತುಗಳನ್ನು ನೀಡುವಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 4 ಮಂದಿ ಹೆಚ್ ಐ ವಿ ಸೋಂಕಿತರಿಗೆ ಮತ್ತು 2 ಮಂದಿ ಬಾಧಿತರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಮಂಜೂರಾತಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಹಚ್ ಐ ವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಲಭ್ಯವಿರುವ ವಿಶೇಷ ಪಾಲನಾ ಯೋಜನೆಯಡಿಯಲ್ಲಿ 297 ಮಕ್ಕಳಿಗೆ ಆರ್ಥಿಕ ಸಹಾಯ ನೀಡಲಾಗಿದೆ. ವಸತಿ ಯೋಜನೆ ಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ 2 ಮಂದಿ ಮತ್ತು ನಗರ ಪ್ರದೇಶದಲ್ಲ ಒಬ್ಬ ಸೋಂಕಿತರಿಗೆ ಸೌಲಭ್ಯ ಮಂಜೂರಾಗಿರುತ್ತದೆ. ಉಚಿತ ಕೈಗಾರಿಕಾ ತರಬೇತಿ ಯೋಜನೆಯಡಿ ಓರ್ವ ಲೈಂಗಿಕ ಕಾರ್ಯಕರ್ತರ ಮಗನಿಗೆ ತರಬೇತಿ ನೀಡಿ ಉದ್ಯೋಗ ನೇಮಕಾತಿಯಾಗಿರುತ್ತದೆ.
ಜಿಲ್ಲೆಯಲ್ಲಿ ಪ್ರಸ್ತುತ 49 ಐಸಿಟಿಸಿ (ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು) ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಖಾಸಗಿ ಸಹಭಾಗಿತ್ವದ ಆಸ್ಪತ್ರೆಗಳಲ್ಲಿ ಕಾರ್ಯಾಚರಿಸುತ್ತದೆ. ಜಿಲ್ಲೆಯಲ್ಲಿ ಒಂದು ಸಂಚಾರಿ ಐಸಿಟಿಸಿ ವಾಹನದಲ್ಲಿ ಸಿಬ್ಬಂದಿಗಳು ಸೇವೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ 2006ರಿಂದ ಕಾರ್ಯಾಚರಿಸುತ್ತಿದೆ. ನಗರದ ಕೆ ಎಂ ಸಿ ಆಸ್ಪತ್ರೆ ಅತ್ತಾವರದಲ್ಲೂ 2011ರಿಂದ ಎ ಆರ್ ಟಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕು ಕೇಂದ್ರ ಆಸ್ಪತ್ರೆಗಳಲ್ಲಿ ಲಿಂಕ್ ಏ ಆರ್ ಟಿ ಚಿಕಿತ್ಸಾ ಕೆಂದ್ರವನ್ನು 2009ರಿಂದ ಆರಂಭಿಸಲಾಗಿದೆ. ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲೂ ಗರ್ಭಿಣಿ ತಪಾಸಣಾ ದಿನಗಳಂದು ಪಿಪಿಟಿಸಿಟಿ ಶಿಬಿರ ( ಗರ್ಭಿಣಿಯರ ಹೆಚ್ ಐ ವಿ ರಕ್ತ ಪರೀಕ್ಷೆ) ಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.
2007ರಿಂದ ಜೂನ್ 2012ರವರೆಗೆ 11431 ಗರ್ಭಿಣಿಯರು ಎಚ್ ಐ ವಿ ಪರೀಕ್ಷೆಗೊಳಪಟ್ಟಿದ್ದು ಇವರಲ್ಲಿ 14 ಪಾಸಿಟಿವ್ ಪತ್ತೆಯಾಗಿದೆ. ಗರ್ಭಿಣಿಯರ ಹೊರತಾಗಿ 17504 ಜನರು ಪರೀಕ್ಷೆಗೊಳಪಟ್ಟವರಲ್ಲಿ 452 ಪಾಸಿಟಿವ್ ಪತ್ತೆಯಾಗಿದೆ. ಎಚ್ ಐ ವಿ ಬಗ್ಗೆ ಅರಿವು ಮೂಡಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಡಾಕ್ಟರ್ ಕಿಶೋರ್ ಹೇಳಿದರು.