Saturday, July 21, 2012

ಪ್ರಾದೇಶಿಕ ಸಾರಿಗೆ ಅದಾಲತ್

ಮಂಗಳೂರು, ಜುಲೈ.21: ಡಿಸೆಂಬರ್ ನಿಂದ ಲಾರಿ ಮತ್ತು ಬಸ್ಸುಗಳಿಗೆ (ಭಾರೀ ವಾಹನಗಳಿಗೆ ) ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯವಾಗಲಿದೆ. ಅಂತಹ ವಾಹನಗಳು ವೇಗ ನಿಯಂತ್ರಕ ಅಳವಡಿಸಿಕೊಳ್ಳದ ಹೊರತು ರಸ್ತೆಗಿಳಿಯುವಂತಿಲ್ಲ. ಆಗ ಅತಿವೇಗದಿಂದ ವಾಹನ ಚಲಿಸುವ ಅಥವಾ ವಾಹನ ಚಲಾಯಿಸುವ ಸಮಸ್ಯೆ ಕೊನೆಗೊಳ್ಳಲಿದೆ.ಇದರಿಂದ ಅಪಘಾತದ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಲಿದೆ. ಅಲ್ಲಿವರೆಗೆ ಇಲಾಖೆಯ ಸಿಬ್ಬಂದಿಗಳು ಆಗಾಗ ತಪಾಸಣೆ ಮಾಡುವ ಮೂಲಕ ಸಾರ್ವಜನಿಕರ ದೂರಿಗೆ ಸ್ಪಂದಿಸುವರೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ.ಮಲ್ಲಿಕಾರ್ಜುನ ಅವರು ತಿಳಿಸಿದರು.
ಅವರು ಶುಕ್ರವಾರ (20-7-12) ರಂದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದ ನಡೆದ ಸಾರಿಗೆ ಅದಾಲತ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕರ್ಕಶ ಹಾರ್ನ್ ಅಳವಡಿಸಿರುವ ಹಲವು ಬಸ್ ಗಳ ಮೇಲೆ ಕೇಸು ದಾಖಲಿಸಲಾಗಿದೆ. 100ಕ್ಕೂ ಅಧಿಕ ಕರ್ಕಶ ಹಾರ್ನ್ಗಳನ್ನು ಕಿತ್ತು ಹಾಕಲಾಗಿದೆ. ನಮ್ಮಲ್ಲಿ ಕಾನೂನು ಅನುಷ್ಠಾನಕ್ಕೆ ಸಿಬ್ಬಂದಿಗಳ ಕೊರತೆ ಇದೆ. ಕೆಲವು ಬ್ರೇಕ್ ಇನ್ಸ್ಪೆಕ್ಟರ್ ಗಳನ್ನು ಒದಗಿಸಲು ಕೋರಿಕೆ ಸಲ್ಲಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಈ ಸಂದರ್ಭದಲ್ಲಿ ವಿವರಿಸಿದರು.ಬಸ್ ಗಳ ಕರ್ಕಶ ಹಾರ್ನ್ ಗಳ ಕಿರಿಕಿರಿಯನ್ನು ತಪ್ಪಿಸಲು ಇದೀಗ ಇನ್ನೊಂದು ಪ್ರಯತ್ನ ನಡೆದಿದೆ. ಹಾರ್ನ್ ಉತ್ಪಾದಕರೊಬ್ಬರನ್ನು ಕರೆಸಿ ಶಬ್ದ ಮಾಲಿನ್ಯ ರಹಿತ ಉತ್ತಮ ಗುಣಮಟ್ಟದ ಒಂದೇ ಮಾದರಿಯ ಸಾಧನಗಳನ್ನು ಅಳವಡಿಸುವ ಮಾತುಕತೆ ನಡೆದಿದೆ. ಅದು ಸಾಧ್ಯವಾಗುವುದೆಂಬ ಆಶಯ ನಮ್ಮದು ಎಂದು ಆರ್ ಟಿ ಒ ನುಡಿದರು.ಬೆಳ್ತಂಗಡಿಯ ಬಹುಭಾಗ ರಾಷ್ಟ್ರೀಕೃತ ಮಾರ್ಗಗಳ ವ್ಯಾಪ್ತಿಯಲ್ಲಿದೆ. ಹಾಗಾಗಿ ಸರಕಾರಿ ಬಸ್ಸುಗಳ ಸೇವೆ ಜಾರಿಯಾಗಬೇಕಾಗಿದೆ. ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಘಟಕದ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಸಾರಿಗೆ ಅಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ದೂರು ಯಾವುದೇ ಇರಲಿ; ನಿರ್ಧಿಷ್ಟ ಪ್ರಕರಣಗಳನ್ನು ಸಾರಿಗೆ ಅಧಿಕಾರಿಯವರ ಗಮನಕ್ಕೆ ತರಲಿ. ಆಗ ಕ್ರಮ ತೆಗೆದು ಕೊಳ್ಳುವುದು ಸುಲಭ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಅಭಿಪ್ರಾಯ ಪಟ್ಟರು.