Monday, July 9, 2012

ಪಡಿತರ ಸಾಮಗ್ರಿ: ಪ್ರಥಮ ಜಿಲ್ಲಾ ಜಾಗೃತ ಸಮಿತಿ ಸಭೆ

ಮಂಗಳೂರು.ಜುಲೈ.09 :ಸಮರ್ಪಕ ಹಾಗೂ ಸಮಗ್ರ ಪಡಿತರ ವಿತರಣೆಗಾಗಿ ಪ್ರತಿ ತಿಂಗಳ 6 ರಿಂದ 25ನೇ ತಾರೀಖಿನವರೆಗೆ ವಾರದ ರಜಾ ದಿನ ಹೊರತು ಪಡಿಸಿ ನ್ಯಾಯಬೆಲೆ ಅಂಗಡಿ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕೆಂದು ದ.ಕ. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನ್ಯಾಯಬೆಲೆ ಅಂಗಡಿಗಳಲ್ಲಿ ದೊರಕುವ ಆಹಾರ ಲಭ್ಯತೆಗಳ ಮಾಹಿತಿಯನ್ನು ಪತ್ರಿಕೆಗಳ ಮೂಲಕ ಮತ್ತು ಗ್ರಾಮಪಂಚಾಯತ್ ಗಳ ಮೂಲಕ ಜನರಿಗೆ ತಿಳಿಸುವಂತಾಗಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಕುಚಿಲಕ್ಕಿ ಪೂರೈಕೆಯನ್ನು ಲಭ್ಯತೆಗನುಗುಣವಾಗಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಉಪನಿರ್ದೇಶಕರಾದ ಶರಣ ಬಸಪ್ಪ ಅವರು ಉತ್ತರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ. ಟಿ. ಶೈಲಜಾ ಭಟ್ ಅವರು, ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಬೇಕೆಂದರಲ್ಲದೆ, ನ್ಯಾಯಬೆಲೆ ಅಂಗಡಿಗಳು ಪಡಿತರ ಚೀಟಿದಾರರಿಗೆ ಅಗತ್ಯಕ್ಕೆ ಸ್ಪಂದಿಸಬೇಕು ಎಂದರು. ಪಡಿತರ ಚೀಟಿ ವಿತರಣೆಯ ಪ್ರಗತಿಯನ್ನು ಪರಿಶೀಲಿಸಿದ ಅಧ್ಯಕ್ಷರು, ಬಡತನ ರೇಖೆಗಿಂತ ಕೆಳಗಿರುವವರಿಗೆ ಖಾಯಂ ಪಡಿತರ ಚೀಟಿ ವಿತರಿಸಿದರೆ ಜಿಲ್ಲೆಯಲ್ಲಿ ಈ ಸಂಬಂಧ ಇರುವ ಗೊಂದಲ ಪರಿಹಾರವಾಗಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ 203 ಗ್ರಾಮಪಂಚಾಯಿತಿಗಳಲ್ಲಿ ಬಂಟ್ವಾಳದ 7, ಮಂಗಳೂರಿನ 2, ಸುಳ್ಯದ ಒಂದು ಪಂಚಾಯಿತಿಯನ್ನು ಒಳಗೊಂಡಂತೆ ಒಟ್ಟು 10 ಪಂಚಾಯಿತಿ ಹೊರತುಪಡಿಸಿ ಉಳಿದೆಲ್ಲೆಡೆ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಸಾಧನಗಳನ್ನು ಅಳವಡಿಸಲಾಗಿದ್ದು, ತಿಂಗಳಾಂತ್ಯದೊಳಗೆ ಪ್ರಕ್ರಿಯೆ ಮುಗಿಸಲು ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಾರ್ಯೋನ್ಮುಖರಾಗುವುದಾಗಿ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಅರ್ಹ ಫಲಾನುಭವಿಗಳು ತಂತಮ್ಮ ಗ್ರಾಮಪಂಚಾಯಿತಿಗಳಿಗೆ ಹೋಗಿ ಫೋಟೋ ತೆಗೆಸಿಕೊಳ್ಳಬೇಕೆಂದು ವಿನಂತಿಸಿದ ಉಪನಿರ್ದೇಶಕರು, ಇನ್ನು ಮುಂದೆ ಆನ್ ಲೈನ್ ನಲ್ಲಿ ಅರ್ಜಿ ಹಾಕಿದ ತಕ್ಷಣವೇ ಫೋಟೋ ತೆಗೆದುಕೊಳ್ಳಲಾಗುವುದು. ನಗರ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಕ್ಕೆ ಫ್ರಾಂಚೈಸಿಗಳನ್ನು ಗುರುತಿಸಲಾಗಿದ್ದು, ಇಲ್ಲಿ ಅರ್ಜಿದಾರರು ಮಾಹಿತಿ ನೀಡಬಹುದು ಎಂದರು.
ಆನ್ ಲೈನ್ ನಲ್ಲಿ ಸ್ವೀಕರಿಸಲಾಗಿರುವ ಅರ್ಜಿದಾರರಿಗೆ ಈ ತಿಂಗಳಾಂತ್ಯದೊಳಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದ ಇಲಾಖಾ ಉಪನಿರ್ದೇಶಕರು, ಸದ್ಯಕ್ಕೆ ಆನ್ ಲೈನ್ ಅರ್ಜಿ ಸೇರ್ಪಡೆ ಕಾರ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಅರ್ಹರಿಗೆ ಅನುಕೂಲವಾಗುವಂತೆ ಮತ್ತೆ ಅರ್ಜಿ ಸ್ವೀಕರಿಸಲು ಆರಂಭಿಸಿದಂತೆ ಮಾಹಿತಿ ನೀಡಲಾಗುವುದು ಎಂದರು.
ಮಾಹಿತಿ ಕೊರತೆಯಾಗದಂತೆ ಪಿಡಿಒಗಳ ನೆರವನ್ನು ಪಡೆಯಲಾಗುವುದು ಎಂದ ಉಪನಿರ್ದೇಶಕರು, ಶಾಲೆಗಳಲ್ಲಿ ಈಗಾಗಲೇ ಬಿಸಿಯೂಟಕ್ಕೆ ಕುಚಿಲಕ್ಕಿಯನ್ನು ವಿತರಿಸಲಾಗುತ್ತಿದೆ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕೋರಿಕೆ ಮೇರೆಗೆ ಅಂಗನವಾಡಿ ಮಕ್ಕಳಿಗೂ ಕುಚಿಲಕ್ಕಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಅವರು ಕೆಲವು ಪ್ರದೇಶಗಳಲ್ಲಿ ಪಡಿತರ ಅಂಗಡಿಗಳು ಪಡಿತರದಾರರಿಗೆ ನಕಾರಾತ್ಮಕ ಉತ್ತರ ನೀಡುವುದು ಮತ್ತು ಅನರ್ಹರಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಸಭೆಯ ಗಮನಸೆಳೆದಾಗ, ಅಂತಹವರ ಮಾಹಿತಿ ನೀಡಿದರೆ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಉಪನಿರ್ದೇಶಕರು ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಶ್ರೀಮತಿ ಗುಲ್ಜಾರ್ ಭಾನು ಅವರು ಮಾತನಾಡಿ, ನಗರದಲ್ಲಿ ವಾರ್ಡ್ ಗಳಲ್ಲಿ ಈ ಸಂಬಂಧ ಮಾಹಿತಿಗಳನ್ನು ಸದಸ್ಯರ ಸಹಕಾರದಿಂದ ನೀಡುವುದರಿಂದ ಜನರಿಗೆ ನೆರವಾಗಲಿದೆ ಎಂದರು. ಉಪಮಹಾಪೌರರಾದ ಶ್ರೀಮತಿ ಅಮಿತಕಲಾ, ಫಲಾನುಭವಿ ಪಡಿತರ ಚೀಟಿದರರಾದ ಶ್ರೀಮತಿ ಸೆಲ್ವಿ, ಗ್ರಾಹಕ ಒಕ್ಕೂಟದ ವಿಷ್ಣು ನಾಯಕ್, ಆಹಾರ ಇಲಾಖೆಯ ಅಧಿಕಾರಿ ಡಿ ಚಿನ್ನಪ್ಪಗೌಡ ಉಪಸ್ಥಿತರಿದ್ದರು.