Friday, July 20, 2012

ನಗರದ ಜನ/ವಾಹನ ದಟ್ಟಣೆ ಪ್ರದೇಶಗಳ ರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು.ಜುಲೈ.20 : ಮಂಗಳೂರು ನಗರದ ಜನದಟ್ಟಣೆ ಮತ್ತು ವಾಹನದಟ್ಟಣೆ ಇರುವ ಪ್ರದೇಶವಾದ ಪಿಎಂ ರಾವ್ ರಸ್ತೆ ಮತ್ತು ಶರವು ಮಹಾಗಣಪತಿ ದೇವಾಲಯ ಅಡ್ಡರಸ್ತೆಯ ಅಗಲೀಕರಣಕ್ಕೆ ತುರ್ತಾಗಿ ಕ್ರಮಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಇಂದು ಬೆಳಗ್ಗೆ ಪಾಲಿಕೆ ವ್ಯಾಪ್ತಿಯಲ್ಲಿರುವ ನಗರದ ಗಣಪತಿ ಹೈಸ್ಕೂಲ್ ರಸ್ತೆ, ಯುಪಿ ಮಲ್ಯ ರಸ್ತೆ ಬಳಿಯಿಂದ ಹೊಟೇಲ್ ವಿಮಲೇಶ್ ಜಂಕ್ಷನ್, ವೆಂಕಟರಮಣ ದೇವಸ್ಥಾನದವರೆಗೆ ಹಾಗೂ ಪಿ ಎಂ ರಾವ್ ರಸ್ತೆ ಮತ್ತು ಶರವು ಮಹಾಗಣಪತಿ ದೇವಸ್ಥಾನದ ಅಡ್ಡ ರಸ್ತೆ, ಕೆ ಎಸ್ ರಾವ್ ರಸ್ತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಭೇಟಿ ನೀಡಿದ ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ ಅಗತ್ಯವಾಗಿದ್ದು, ತಕ್ಷಣವೇ ರಸ್ತೆಗಳ ಅಗಲೀಕರಣವಾಗಬೇಕು ಹಾಗೂ ಅಭಿವೃದ್ಧಿ ಪರ ಕೆಲಸಗಳಿಗೆ ಸ್ಥಳಿಯ ಜನರ ಸಹಕಾರ ಮುಖ್ಯ ಎಂದರು. ನಾಗರೀಕರು ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಇರುವ ಟಿ ಡಿ ಆರ್/ ಡಿ ಆರ್ ಅವಕಾಶದಡಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದರು.
ಗಣಪತಿ ಹೈಸ್ಕೂಲ್ ರಸ್ತೆ ಒಟ್ಟು ಉದ್ದ ಪ್ರಸಕ್ತ 573 ಮೀಟರ್ ಗಳಿದ್ದು, 20ರಿಂದ 25 ಅಡಿ ಅಗಲವಿದೆ. ರಸ್ತೆಯ ಪ್ರಸಾವಿತ ಅಗಲ 50 ಅಡಿ, ಪಿ ಎಂ ರಾವ್ ರಸ್ತೆ ಮತ್ತು ಶರವು ಮಹಾಗಣಪತಿ ದೇವಸ್ಥಾನ ಅಡ್ಡ ರಸ್ತೆ 40 ಅಡಿ. ಈ ಸಂದರ್ಭದಲ್ಲಿ 31 ಸೊತ್ತುಗಳಲ್ಲಿನ ಖಾಸಗಿ ಕಟ್ಟಡಗಳ ಆವರಣಗೋಡೆ ಹಾಗೂ 10 ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗಬಹುದು. ಮುಂದಿನ ವಾರದೊಳಗಾಗಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.
ನಗರದ ಇನ್ನೊಂದು ಪ್ರಮುಖ ರಸ್ತೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್-ನಾಗೂರಿ ಬಳಿಯಿಂದ ಕಂಕನಾಡಿ ರೈಲ್ವೇ ಸ್ಟೇಷನ್(ಮಂಗಳೂರು ಜಂಕ್ಷನ್) ರಸ್ತೆ ಅಗಲೀಕರಣ- ಈ ರಸ್ತೆ 360 ಮೀಟರ್ ಉದ್ದವಿದ್ದು, ಪ್ರಸ್ತುತ ಅಗಲ 12ರಿಂದ 15 ಅಡಿ. ರಸ್ತೆಯ ಪ್ರಸ್ತಾವಿತ ಅಗಲ 50ಮೀಟರ್ ವರೆಗೆ 60 ಅಡಿ. 51 ಮೀಟರ್ ನಿಂದ 360 ಮೀಟರ್ ವರೆಗೆ 40 ಅಡಿ. ರಸ್ತೆ ಅಗಲೀಕರಣ ವೇಳೆ 11 ಖಾಸಗಿ ಕಟ್ಟಡ/ ಆವರಣ ಗೋಡೆ ನೆಲಸಮವಾಗಲಿದ್ದು, ಈಗಾಗಲೇ ಈ ಸಂಬಂಧ ಸಮೀಕ್ಷೆ ನಡೆಸಿ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ರಸ್ತೆ ಪರಿಶೀಲನಾ ವೇಳೆ ಮಹಾನಗರಪಾಲಿಕೆ ಆಯುಕ್ತರಾದ ಡಾ. ಕೆ ಹರೀಶ್ ಕುಮಾರ್, ಕಾರ್ಯಪಾಲಕ ಅಭಿಯಂತರ ರಾಜಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತ ಕೆ ಎಸ್ ಲಿಂಗೇಗೌಡ, ತಾಂತ್ರಿಕ ಸಲಹೆಗಾರರು ಹಾಗೂ ಮನಾಪ ಇಂಜಿನಿಯರ್ ಗಳು ಉಪಸ್ಥಿತರಿದ್ದರು.