Tuesday, July 31, 2012

ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಿಗೆ ಬೀಳ್ಕೊಡುಗೆ

ಮಂಗಳೂರು.ಜುಲೈ.31:ದಕ್ಷಿಣ ಕನ್ನಡ ಜಿಲ್ಲಾ ಸಾಂಖ್ಯಿಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅಂಕಿ ಅಂಶ ವರದಿ ಸಲ್ಲಿಸುವಿಕೆಯಲ್ಲಿ 27ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಐದನೇ ಸ್ಥಾನಕ್ಕೆ ತಲುಪಿಸಿದ ತೃಪ್ತಿ ತನಗಿದೆ. ಇದಕ್ಕಾಗಿ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ತಾನು ಕೃತಜ್ಞ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೆ. ರಮೇಶ್ ಉಪಾಧ್ಯ ಅವರು ಹೇಳಿದರು.
ಇಂದು ಮಂಗಳೂರಿನ ಅವರ ಕಚೇರಿಯಲ್ಲಿ ನಿವೃತ್ತರಾಗುವ ವೇಳೆ ಸಹೋದ್ಯೋಗಿಗಳು ನೀಡಿದ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 37 ವರ್ಷಗಳ ಕಾಲ ವಿವಿಧ ಇಲಾಖೆಗಳಲ್ಲಿ ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕರ್ತವ್ಯನಿರ್ವಹಿಸಿರುವ ಅವರು ಸಹೋದ್ಯೋಗಿಗಳೊಂದಿಗೆ ತಮ್ಮ ಸೇವಾವಧಿಯ ಅನುಭವವನ್ನು ಹಂಚಿಕೊಳ್ಳುತ್ತಾ ದಕ್ಷಿಣ ಕನ್ನಡದ ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸಿದರು. ಸರ್ಕಾರಿ ಸೇವೆಯಲ್ಲಿ ವಿಧೇಯತೆಯಿಂದ ನಡೆದುಕೊಳ್ಳಬೇಕು; ಹಾಗೂ ಸೇವೆಯೇ ನಮ್ಮ ಧ್ಯೇಯವಾಗಿರ ಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್ ಅವರು, ವೃತ್ತಿ ಜೀವನದಲ್ಲಿ ನಿವೃತ್ತಿ ಅನಿವಾರ್ಯ ಎಂದರು. ಸಾಂಖ್ಯಿಕ ಅಧಿಕಾರಿಗಳು ನೇರ ನಡೆ ನುಡಿಯವರಾಗಿದ್ದು ತಮ್ಮ ಸಹೋದ್ಯೋಗಿಗಳೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ನಡೆದುಕೊಂಡವರು. ಅವರ ನಿವೃತ್ತಿ ಜೀವನ ಶುಭಕರವಾಗಲಿ ಎಂದು ಹಾರೈಸಿದರು.
ಕೆ. ರಮೇಶ್ ಉಪಾಧ್ಯ ಅವರ ಪತ್ನಿ ಶ್ರೀಮತಿ ಲೀಲಾ ಆರ್ ಉಪಾಧ್ಯ ಸಮಾರಂಭಕ್ಕೆ ಸಾಕ್ಷಿಯಾದರು. ಸಹೋದ್ಯೋಗಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಸಾಂಖ್ಯಿಕ ಅಧಿಕಾರಿ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದರು. ಡಾ. ಬಿ ಕೆ ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಸಾಂಖ್ಯಿಕ ಅಧಿಕಾರಿ ಪ್ರದೀಪ್ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಭಟ್ ವಂದನಾರ್ಪಣೆ ಮಾಡಿದರು.