Tuesday, July 24, 2012

'ನೀರು ನಿರ್ವಹಣೆಗೆ ಸಮಗ್ರ ಕ್ರಿಯಾಯೋಜನೆ ರೂಪಿಸಿ' ಮಾಸಿಕ ಕೆಡಿಪಿ

ಮಂಗಳೂರು.ಜುಲೈ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕಡಿಮೆ ಮಳೆಯಾಗಿದ್ದು, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಮತ್ತು ನೀರು ನಿರ್ವಹಣೆಗೆ ಆದ್ಯತೆ ನೀಡಬೇಕೆಂದು ಇಂಜಿನಿಯರಿಂಗ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಕಿಂಡಿ ಅಣೆಕಟ್ಟುಗಳು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಭೆಗೆ ನೀಡಲು ಸೂಚಿಸಿದರು.
ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಭಿಯಂತರ ಸತ್ಯ ನಾರಾಯಣ ಅವರು, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಸುಮಾರು 42 ಪ್ರಸ್ತಾವನೆಗಳನ್ನು ಅಂದಾಜು ಮೊತ್ತ ರೂ. 575.00 ಕೋಟಿಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮೊದಲನೇ ಹಂತದಲ್ಲಿ ಯೋಜನೆಗಳನ್ನು 254 ಕೋಟಿ ರೂ.ಗೆ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು. ಬಂಟ್ವಾಳಕ್ಕೆ 6 ಬಹುಗ್ರಾಮ ಕುಡಿಯುವ ಯೋಜನೆ ಮಂಜೂರಾಗಿದೆ ಎಂದ ಅವರು, ಈ ಯೋಜನೆಯ ಪ್ರಗತಿ ಪರಿಶೀಲನೆ ಸಂಬಂಧ 45 ದಿನಗಳಿಗೊಮ್ಮೆ ಸಭೆ ಕರೆಯಲಾಗಿದ್ದು, ಹಂತಹಂತವಾಗಿ ಯೋಜನೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ನೈಸರ್ಗಿಕವಾದ ಝರಿ ನೀರು ಆಧಾರಿತ ನೀರು ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು, ಅಧಿಕಾರಿಗಳು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಿಂದ ಸ್ಥಳೀಯ ಜನರ ಮನವೊಲಿಕೆ ಸುಲಭ ಸಾಧ್ಯ ಎಂದರಲ್ಲದೆ, ಆ ಪ್ರದೇಶದವರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು ಎಂದರು.
ಝರಿ ನೀರು ಆಧಾರಿತ ನೀರು ಸರಬರಾಜು ಯೋಜನೆಗಳಡಿ ಶೀಘ್ರವೇ ನಾಲ್ಕು ಯೋಜನೆಗಳನ್ನು ಸಂಪೂರ್ಣಗೊಳಿಸಲಾಗುವುದು ಎಂದು ಸತ್ಯ ನಾರಾಯಣ ಅವರು ಹೇಳಿದರು.
ಈಗಾಗಲೇ ಮಳವೂರಿನಲ್ಲಾದ ಅವಘಡಗಳು ಮರುಕಳಿಸದಂತೆ ಹಾಗೂ ಯೋಜನೆ ಸಮಗ್ರ ಸಾಧಕ, ಬಾಧಕಗಳನ್ನು ಅರಿತು, ಎನ್ ಐ ಟಿಕೆ ಯಂತಹ ಸಂಸ್ಥೆಗಳ ನೆರವಿನೊಂದಿಗೆ ಯೋಜನೆ ರೂಪಿಸಿ ಎಂದು ಸಿ ಇಒ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜಿಲ್ಲೆಯಲ್ಲಿ 44 ಸ್ಥಳಗಳಲ್ಲಿ ಫ್ಲೋರೈಡ್ ಅಂಶ ನೀರಿನಲ್ಲಿದೆ ಎಂಬ ಹೇಳಿಕೆ ಮತ್ತು ಈ ಬಗ್ಗೆ ತಾವು ಖುದ್ದಾಗಿ ಸಂಪರ್ಕಿಸಿದಾಗ ನೀಡಿದ ವಿರೋಧಾಭಾಸದ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಮಾಹಿತಿಯು ಸ್ಪಷ್ಟ ಹಾಗೂ ಸತ್ಯವಾಗಿರಲಿ ಎಂದರು.
ಮಳೆ ನೀರು ಸಂರಕ್ಷಣೆ ಮತ್ತು ನೀರು ನಿರ್ವಹಣೆ ಹಾಗೂ ಎಲ್ಲ ಕಚೇರಿಗಳಲ್ಲಿ ಮಳೆ ಕೊಯ್ಲಿಗೆ ಆದ್ಯತೆ ನೀಡಬೇಕೆಂದ ಅವರು, ದೂರದೃಷ್ಟಿಯ ಯೋಜನೆ ರೂಪಿಸಿ ನೀರಿನ ಕೊರತೆ ನಿವಾರಿಸಬಹುದೆಂದರು. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ರಡಿ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಅಂತರ್ಜಲ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾದಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹ ಅಧ್ಯಕ್ಷರಾಗಿರುತ್ತಾರೆ.
ಕಿಂಡಿ ಅಣೆಕಟ್ಟುಗಳ ನಿರ್ವಹಣೆಯ ಅಗತ್ಯವನ್ನು ಪ್ರತಿಪಾದಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್ ಹಾಗೂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಅವರು, ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸಮರ್ಪಕ ರೀತಿಯಲ್ಲಾಗುತ್ತಿಲ್ಲ ಎಂದರು. ಉತ್ತರಿಸಿದ ಅಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ 219 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದ್ದು, 82 ಸಂಪೂರ್ಣಗೊಂಡಿದೆ. 72 ಕಾಮಗಾರಿ ಪ್ರಗತಿಯಲ್ಲಿದೆ. 28 ಆರಂಭವಾಗಿದೆ ಎಂದರು.
ಎಸ್ ಎಸ್ ಎಲ್ ಸಿಯಲ್ಲಿ ಮರು ಪರೀಕ್ಷೆಗೆ ಹಾಜರಾಗಿದ್ದ 4,069 ವಿದ್ಯಾರ್ಥಿಗಳಲ್ಲಿ 1459 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಉತ್ತೀರ್ಣಗೊಂಡ ಬಳಿಕ ಅವರಿಗೆ ಕಾಲೇಜುಗಳಲ್ಲಿ ಸೀಟು ಸಿಗುವಂತೆ ಕ್ರಮ ವಹಿಸುವಂತೆ ಉಪನಿರ್ದೇಶಕರು ಪದವಿಪೂರ್ವಶಿಕ್ಷಣ ಇವರ ಜೊತೆ ಸಂಪರ್ಕ ಸಾಧಿಸಲಾಗಿದೆ ಎಂದು ಶಿಕ್ಷಣಾಧಿಕಾರಿಗಳು ಉತ್ತರಿಸಿದರು.
ದೈಹಿಕ ವಿಕಲ ಚೇತನ ಮಕ್ಕಳನ್ನು ಸಂಘಸಂಸ್ಥೆಗಳು ದತ್ತು ಪಡೆದು ಅವರಿಗೆ ವಿಶೇಷ ರೀತಿಯ ಸವಲತ್ತನ್ನು ನೀಡಿದ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದ ಅವರು, ಬಸವ ವಸತಿ ಯೋಜನೆ ಫಲಾನುಭವಿಗಳ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತೆರೆಯುವ ಕುರಿತು ಮತ್ತು ವಸತಿ ಯೋಜನೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಬಗೆಹರಿದಿದೆ ಎಂದು ಸಿಇಒ ಅವರು ಮಾಹಿತಿ ನೀಡಿದರು. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಈ ಸಂಬಂಧದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಶಾಲೆಗಳಲ್ಲಿ ಹಸುರೀಕರಣ ಮತ್ತು ಮಳೆಕೊಯ್ಲು ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಯಿತು.
ಎಲ್ಲ 203 ಗ್ರಾಮಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಜಾಗಗಳನ್ನು ಗುರುತಿಸಲಾಗಿದ್ದು, ಯೋಜನೆ ಯಶಸ್ಸಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಸಿಇಒ ಹೇಳಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ನಿಗಮ ಮತ್ತು ಮಂಡಳಿಗಳು ಬಹುದೂರ ಮತ್ತು ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯ ವೃತ್ತಿಕೌಶಲ್ಯ ತರಬೇತಿಗೆ ಯೋಜನೆ ರೂಪಿಸಿ ಎಂದು ಸಿಇಒ ಅವರು ಹೇಳಿದರು.
ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕ ಕಾರ್ಯಾರಂಭಿಸಿದ್ದು, ಬಾಲಕಾರ್ಮಿಕರು ಅನಾಥ ಮಕ್ಕಳು ಪತ್ತೆಯಾದರೆ ಅವರನ್ನು ಬೆಳ್ತಂಗಡಿಯಲ್ಲಿ ಸರ್ವಶಿಕ್ಷಣ ಅಭಿಯಾನದಡಿ ಆರಂಭಿಸಲಾದ ವಸತಿ ಶಾಲೆ ಮತ್ತು ಮಂಗಳೂರಿನ ಕಾಪಿಕಾಡಿನಲ್ಲಿರುವ ತಂಗುದಾಣದಲ್ಲಿ ಅವಕಾಶ ಕಲ್ಪಿಸಬಹುದಾಗಿದೆ.ಇದಲ್ಲದೆ ಮ್ಕಕಳ ಹಕ್ಕು ಸಂರಕ್ಷಣೆಗೆ 41 ಸಂಘಸಂಸ್ಥೆಗಳು ಜಿಲ್ಲೆಯಲ್ಲಿದೆ ಎಂದು ಸಿಇಒ ಅವರು ಹೇಳಿದರು. ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ, ಈ ಸಂಬಂಧ ವಿಶೇಷ ಗ್ರಾಮಸಭೆ ಕರೆಯುವ ಬಗ್ಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಮಾರ್ಗದರ್ಶನ ನೀಡಲು ಸಿಇಒ ಸೂಚಿಸಿದರು. ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಆದ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಲಾಯಿತು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿಗಳು, ಬಿಪಿಎಲ್ ಕಾರ್ಡ್ ಹೊಂದಿರುವ ಒಂದು ಕುಟುಂಬ ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ 7 ಆಸ್ಪತ್ರೆಗಳಲ್ಲಿ ಉಚಿತ ಶುಶ್ರೂಷೆ ಪಡೆಯಬಹುದು ಎಂಬ ಮಾಹಿತಿ ನೀಡಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ ಜನಾರ್ಧನ, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಖ್ ಲತೀಫ್, ಯೋಜನಾನಿರ್ದೇಶಕರಾದ ಶ್ರೀಮತಿ ಎನ್ ಸಿ ಸೀತಮ್ಮ ಅವರು ಉಪಸ್ಥಿತರಿದ್ದರು.