Friday, July 6, 2012

ಮಂಗಳೂರಿನಲ್ಲಿ 3ಡಿ ತಾರಾಲಯ ಸ್ಥಾಪನೆಗೆ ಅನುಮೋದನೆ- ಎನ್.ಯೋಗೀಶ್ ಭಟ್

ಮಂಗಳೂರು, ಜುಲೈ.06 : ಹಾಂಕಾಂಗ್ ಮಕಾವೋಗಳಂತಹ ವಿದೇಶಗಳಲ್ಲಿ 18 ಡಯಾಮೀಟರ್ ಇರುವ ಗೋಲ ಹಾಗೂ 3 ಡಿ ತಾರಾಲಯವು ಇದೀಗ ಪ್ರಪ್ರಥಮವಾಗಿ ಭಾರತದಲ್ಲಿ ಕರ್ನಾಟಕದ ಮಂಗಳೂರಿಗೆ ಮಂಜೂರಾಗಿದ್ದು,ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಆಕರ್ಷಣೀಯ ಮನೋರಂಜನೆ ಹಾಗೂ ವಿಜ್ಞಾನ ಮಾಹಿತಿ ನೀಡಬಲ್ಲ ತಾರಾಲಯವಾಗಲಿದೆ.ಕಾಮಗಾರಿಯು ಶೀಘ್ರದಲ್ಲಿಯೇ ಆರಂಭವಾಗಲಿದ್ದು,ಇದು ಭಾರತದಲ್ಲಿ ಪ್ರಪ್ರಥಮವಾಗಿ ಮಂಗಳೂರಿಗೆ ಲಭ್ಯವಾಗಲಿದೆ. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರವರ 150 ನೇ ಹುಟ್ಟುಹಬ್ಬದ ಸಲುವಾಗಿ ಅವರ ಸ್ಮರಣಾರ್ಥ ಈ ತಾರಾಲಯಕ್ಕೆ ಸ್ವಾಮಿ ವಿವೇಕಾನಂದ ತಾರಾಲಯ ಎಂದು ನಾಮಕರಣ ಮಾಡಲಾಗುವುದೆಂದು ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್ ತಿಳಿಸಿರುತ್ತಾರೆ.
ಈ ತಾರಾಲಯಕ್ಕಾಗಿ ಸಹಕರಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು ರೂ.11.00 ಕೋಟಿ ಬಿಡುಗಡೆ ಮಾಡಿರುವುದನ್ನು ಸ್ಮರಿಸಲಾಗುವುದು. ಹಾಗೂ 18 ಡಯಾಮೀಟರ್ ಇರುವ ಗೋಲಹಾಗೂ 3ಡಿ(3ಡೈಮೆನ್ಸಶನ್)ಹಾಗೂ ತಂತ್ರಜ್ಞಾನಕ್ಕೆ ಉನ್ನತೀಕರಿಸಲು ಹೆಚ್ಚುವರಿ 13.50 ಕೋಟಿ (ಒಟ್ಟು 24.50 ಕೋಟಿ) ಬಿಡುಗಡೆ ಮಾಡಲು ಸಚಿವ ಸಂಪುಟದ ಅನುಮೋದನೆ ಪಡೆದಿರುವ ಮಾನ್ಯ ಮುಖ್ಯಮಂತ್ರಿಗಳಾದ ಸದಾನಂದ ಗೌಡರವರಿಗೂ ಮತ್ತು ಈ ಯೋಜನೆಯ ರೂವಾರಿಯಾಗಿರುವ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎನ್.ವಿದ್ಯಾಶಂಕರ್ ಅವರಿಗೂ ಉಪಸಭಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.