Monday, July 30, 2012

ಸಾಂಕ್ರಾಮಿಕ ರೋಗ ಕುರಿತು ಸಕಾಲಿಕ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಮಂಗಳೂರು,ಜುಲೈ.30: ಜಿಲ್ಲೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳ ಹೊರತಾಗಿಯೂ ಸಾಂಕ್ರಾಮಿಕ ರೋಗಗಳ ಬಗ್ಗೆ ಸಕಾಲದಲ್ಲಿ ವರದಿ ಬಾರದಿರುವುದನ್ನು ತಾನು ಗಮನಿಸಿದ್ದು, ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಕಾಲದಲ್ಲಿ ವರದಿ ಒದಗಿಸುವುದು ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ವೈದ್ಯರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಡೆಂಗ್ಯು ಪ್ರಕರಣ ನಿಯಂತ್ರಣ ಹಾಗೂ ಚಿಕಿತ್ಸಾ ಕ್ರಮದ ಬಗ್ಗೆ ಖಾಸಗಿ ವೈದ್ಯರಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಲವು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗದಿಂದ ದಾಖಲಾದ ರೋಗಿಗಳ ಮಾಹಿತಿ ರೋಗ ಉಲ್ಭಣಗೊಂಡ ಬಳಿಕವಷ್ಟೇ ತಿಳಿಯುತ್ತದೆ. ವರದಿ ಮಾಡುವಿಕೆಯಲ್ಲಿ ವಿಳಂಬವಾಗುವುದರಿಂದ ಸಂಭವಿಸುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ತಿಳಿದಿರಬೇಕು ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಹೇಳಿದರು. ಹಲವು ರೋಗಗಳ ನಿರ್ಮೂಲನೆ ಅಸಾಧ್ಯವಾದರೂ ನಿಯಂತ್ರಣ ಸಾಧ್ಯ. ನಿಯಂತ್ರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು, ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಶುಚಿತ್ವ ಇಲ್ಲದಿರುವುದೇ ಹಲವು ಸಮಸ್ಯೆಗಳಿಗೆ, ರೋಗಗಳಿಗೆ ಕಾರಣವಾಗಿದ್ದು ನಮ್ಮ ಜಿಲ್ಲೆ ಸ್ವಚ್ಛ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಘನತ್ಯಾಜ್ಯ, ದ್ರವತ್ಯಾಜ್ಯ ವಿಲೇಯಲ್ಲೂ ಹಲವು ಮಾದರಿಗಳನ್ನು ರಾಜ್ಯಕ್ಕೆ ನೀಡಿದ ಜಿಲ್ಲೆ ಎಂದ ಅವರು, ಎಲ್ಲ ಯೋಜನೆಗಳ ಯಶಸ್ವಿಗೆ ಸಾಮೂಹಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆ ಇರಬೇಕೆಂದರು.
ಜಿಲ್ಲೆಯ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅರಿವು ಮೂಡಿಸುವ ಕೆಲಸ ಇನ್ನಷ್ಟು ಆಗಬೇಕೆಂದರು. ಆರೋಗ್ಯ ಕ್ಷೇತ್ರಕ್ಕೆ ವಲಸಿಗರು ಸವಾಲಾಗಿ ಪರಿಣಮಿಸಿದ್ದು, ಈ ಸವಾಲನ್ನು ನಿಭಾಯಿಸಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಕೆ ಎಂ ಸಿಯ ವೈದ್ಯಕೀಯ ತಜ್ಞ ಡಾ ಚಕ್ರಪಾಣಿ ಎಂ ಅವರು, ಡೆಂಗ್ಯು ಜ್ವರ ವೈರಸ್ ನಿಂದ ಬರುವ ರೋಗವಾಗಿದ್ದು ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಈಡಿಸ್ ಸೊಳ್ಳೆಯಿಂದ ಹರಡುವ ರೋಗವಿದಾಗಿದ್ದು, ಹರಡುವ ತೀವ್ರತೆ ಜಾಸ್ತಿ, ಡೆಂಗ್ಯು ಸಾಮಾನ್ಯ, ಡೆಂಗ್ಯು ರಕ್ತಸ್ರಾವ, ಡೆಂಗ್ಯು ಪ್ರಜ್ಞೆ ತಪ್ಪುವ ಜ್ವರ ಎಂದು ಗುರುತಿಸಲಾಗಿದ್ದು,ರೋಗ ಲಕ್ಷಣಗಳನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಇದ್ದಕ್ಕಿದ್ದ ಹಾಗೆ ತೀವ್ರ ಸ್ವರೂಪದ ಜ್ವರ, ತಲೆನೋವು (ಹಣೆಯ ಮುಂಭಾಗದಲ್ಲಿ ನೋವು) ವಿಪರೀತ ಮೈನೋವು, ಕಣ್ಣುಗುಡ್ಡೆ ನೋವು, ಮೈಮೇಲೆ ಕೆಂಪು ದಡಿಕೆ ಇದರ ಲಕ್ಷಣಗಳು. ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ವೇಳೆ ಸಕ್ರಿಯವಾಗಿರುತ್ತದೆ. ಬಿಟ್ಟು ಬಿಟ್ಟು ಬರುವ ಚಳಿ, ಜ್ವರ, ಬೆವರುವಿಕೆ, ತಲೆನೋವು ಮಲೇರಿಯಾದ ಮುಖ್ಯ ಲಕ್ಷಣ ಎಂದು ತಮ್ಮ ಸಂಪನ್ಮೂಲ ನುಡಿಯಲ್ಲಿ ವಿವರಿಸಿದರು.
ಮಕ್ಕಳ ತಜ್ಞರಾದ ಡಾ ಬಾಲಕೃಷ್ಣ ರಾವ್, ಮೈಕ್ರೋ ಬಯಾಲಜಿಸ್ಟ್ ವೀಣಾ, ಕೀಟಶಾಸ್ತ್ರಜ್ಞರಾದ ಮುಕ್ತ ಮಾತನಾಡಿದರು. ಜಿಲ್ಲಾ ಮಲೇರಿಯಾ ಡಾಕ್ಟರ್ ಅರುಣ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ ರಾಜೇಶ್ ಸ್ವಾಗತಿಸಿದರು. ಜಯರಾಂ ಕಾರ್ಯಕ್ರಮ ನಿರೂಪಿಸಿದರು.