Thursday, July 26, 2012

' ಮಾನವಸಂಪನ್ಮೂಲ ಸದ್ಬಳಕೆ ಅಗತ್ಯ'

ಮಂಗಳೂರು, ಜುಲೈ. 26 : ಜನಸಂಖ್ಯಾ ಸ್ಫೋಟಕ್ಕೆ ದಕ್ಷಿಣ ಕನ್ನಡ ಹೊರತಾಗಿದ್ದು, ನಮ್ಮ ಜಿಲ್ಲೆಯಲ್ಲಿ ಮಾನವಸಂಪನ್ಮೂಲ ಸದ್ಬಳಕೆಯಾಗಿದೆ. ನಮ್ಮದು ಯುವರಾಷ್ಟ್ರ ಎಂದು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಇಂದು ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವಿಶ್ವವಿದ್ಯಾನಿಲಯ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ನಮ್ಮ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿರುವುದರಿಂದ ಜನನ ಪ್ರಮಾಣದಲ್ಲಿ ಸಾಕಷ್ಟು ಹಿಡಿತವನ್ನು ಸಾಧಿಸಿದೆ. ಒಂದು ಮನೆಯಲಿ ಎರಡೇ ಮಕ್ಕಳಿರುವರು. ಯುವಶಕ್ತಿಯ ಸದ್ಬಳಕೆಯಾಗಬೇಕೆಂದರು.
ಮಾನವ ಸಂಪನ್ಮೂಲದ ಸದ್ಬಳಕೆಯಿಂದ ಹಲವು ಸಮಸ್ಯೆಗಳು ಪರಿಹಾರವಾಗಲಿದ್ದು, ಸುಸ್ಥಿರ ಅಭಿವೃದ್ಧಿ ಸಾಧ್ಯ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ನೀರಿನ ಸಮಸ್ಯೆ, ವಸತಿ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮುಂದಾಗೋಣ. ರಾಷ್ಟ್ರ,ರಾಜ್ಯ,ಜಿಲ್ಲೆ ಎಲ್ಲಾ ಕಡೆಗಳಲ್ಲೂ 1951 ನೇ ಇಸವಿಗೆ ಹೋಲಿಸಿದರೆ ಜನಸಂಖ್ಯೆ 4 ರಿಂದ ನಾಲ್ಕುವರೆ ಪಟ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆಯೆಂದು ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್ .ಚನ್ನಪ್ಪ ಗೌಡ ಹೇಳಿದರು
ಕರ್ನಾಟಕದ ಜನಸಂಖ್ಯೆಯು 1951 ರಲ್ಲಿ ಕೇವಲ 1 ಕೋಟಿ 94 ಲಕ್ಷ ಇತ್ತು. 2011 ರ ಜನಗಣತಿಯ ಪ್ರಕಾರ 6 ಕೋಟಿ 11 ಲಕ್ಷ ಆಗಿರುತ್ತದೆ. ಮಂಗಳೂರು ನಗರದಲ್ಲಿ 1 ಲಕ್ಷ ಇದ್ದ ಜನಸಂಖ್ಯೆ ಇದೀಗ 5 ಲಕ್ಷ ಮೀರಿದೆ. ನಮ್ಮ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವುದು ಆವಶ್ಯವೆಂದು ಜಿಲ್ಲಾಧಿಕಾರಿ ಅವರು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಧನಲಕ್ಷ್ಮಿಜನಾರ್ಧನ್ ಮಾತನಾಡಿ ಜನಸಂಖ್ಯೆ ಹೆಚ್ಚಳವು ದೇಶದ ಸಮಸ್ಯೆ ಮಾತ್ರವಲ್ಲದೆ ಸಮಾಜದ ಸಮಸ್ಯೆಯು,ಒಂದು ಸಂಸಾರದ ಸಮಸ್ಯೆಯು ಹೌದು.ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿ,ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣವೆಂದು ತಿಳಿಸಿದರು. ಇಂದು ಕಾರ್ಗಿಲ್ ಹುತಾತ್ಮರ ದಿನಾಚರಣೆಯೂ ಆಗಿದ್ದು,ಹಲವಾರು ಸೈನಿಕರು ಈ ಕಾರ್ಗಿಲ್ ಯುದ್ಧದಲ್ಲಿ ಮಡಿದಿದ್ದಾರೆ. ಜನರನ್ನು ಕಾಪಾಡುವುದು ಸೈನಿಕರ ಕರ್ತವ್ಯವಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮಿನಾರಾಯಣ ಭಟ್ ಇವರು ಮಾತನಾಡಿದರು.ವಿಶ್ವ ಜನಸಂಖ್ಯಾ ದಿನಾಚರಣೆಯಂಗವಾಗಿ ಏರ್ಪಡಿಸಿರುವ ಭಾಷಣ ಸ್ಫರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಆರ್.ಸಿ.ಎಚ್ ಡಾ.ರುಕ್ಷಿಣಿ ಪ್ರಸ್ತಾವಿಕ ಭಾಷಣವನ್ನು ಮಾಡಿ, ವಿಶ್ವ ಜನಸಂಖ್ಯೆಯು 500 ಕೋಟಿಯನ್ನು 11-7-1987 ರಂದು ತಲುಪಿದ ಬಳಿಕ ಆ ದಿನವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯು ತೀರ್ಮಾನಿಸಿತು.ಅಂದಿನಿಂದ ಪ್ರತೀ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆಯೆಂದು ತಿಳಿಸಿದರು. ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕರಾದ ಡಾ.ಜಯವಂತ ನಾಯಕ್ ಈ ಸಂದರ್ಭದಲ್ಲಿ ಜನಸಂಖ್ಯಾ ಸ್ಥಿರತೆ ಮತ್ತು ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿದರು.