Thursday, July 26, 2012

ಅಭಿವೃದ್ಧಿ ಕ್ರಮಗಳಿಗೆ ಬದ್ಧ: ಜಿಲ್ಲಾಧಿಕಾರಿ

ಮಂಗಳೂರು.ಜುಲೈ.26:: ಬೆಳ್ತಂಗಡಿ ತಾಲೂಕಿನ ಬಹುದೂರದ ಮತ್ತು ಒಳನಾಡು ಪ್ರದೇಶಗಳ ಅಭಿವೃದ್ದಿ ಸಂಬಂಧ ಜನಸಂಪರ್ಕ ಸಭೆಯಲ್ಲಿ ಘೋಷಿಸಿದ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಲಾಗುವುದು ಎಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು, ಈಗಾಗಲೇ ಹೇಳಿದಂತೆ ಸ್ಥಳೀಯ 13 ಜನರಿಗೆ ಶಿಕ್ಷಕರ ಕೆಲಸವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಆಯೋಜಿಸಲಾಗಿದ್ದ ಇಲಾಖಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ಜನಸಂಪರ್ಕ ಸಭೆಯಲ್ಲಿ ನೀಡಲಾಗಿದ್ದ ಆಶ್ವಾಸನೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.ಸರ್ಕಾರ ಐದು ಕೋಟಿ ರೂ.ಗಳನ್ನು ದುರ್ಗಮ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ನೀಡಿದ್ದು ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ, ಸಮನ್ವಯ ಸಾಧಿಸಿ ಹಂತ ಹಂತವಾಗಿ ಶೀಘ್ರವೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿರದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದ ಅವರು, ಈ ಪ್ರದೇಶಗಳ ಅಭಿವೃದ್ಧಿ ಸಂಬಂಧ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.ಕುತ್ಲೂರು ಎಳನೀರು ರಸ್ತೆಗೆ ಅಂದಾಜುಪಟ್ಟಿ ಸಲ್ಲಿಸುವಂತೆ ಸೂಚಿಸಿದ್ದನ್ನು ಕಾಲಮಿತಿಯೊಳಗೆ ಕೈಗೊಳ್ಳದ ಅಧಿಕಾರಿಗೆ ಈಗಾಗಲೇ ಕಾರಣ ಕೇಳಿ ನೋಟೀಸು ನೀಡಲಾಗಿದ್ದು, ಇಲ್ಲಿನ ಕೆಲಸದ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವಲ್ಲಿ ನಿರಾಸಕ್ತಿ ವಹಿಸದಿರಿ ಎಂದರು.
ಅಧಿಕಾರಿಗಳು ಆದ್ಯತೆಯ ಮೇರೆಗೆ, ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದ ಅವರು, ಈಗಾಗಲೇ ಇಲ್ಲಿನ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಎಂಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ಬೆಳ್ತಂಗಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಇಂದಿನಿಂದ ಒಂದು ವಾರದೊಳಗೆ ಕ್ರಿಯಾಯೋಜನೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.
ಈ ಕಾಮಗಾರಿಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ಸಮಿತಿಯಡಿ ಅನುಮೋದನೆ ನೀಡಲಾಗಿದ್ದು, ನೂಜೋಡಿ ಕುಳಂತಾಜೆ ರಸ್ತೆ, ಕುತ್ಲೂರು ಗ್ರಾಮದ ಪಿಲಿಯಾಡಿ-ನೆಲ್ಲಿತಡ್ಕ ರಸ್ತೆ ದುರಸ್ತಿ, ಸುಲ್ಕೇರಿಮೊಗ್ರುವಿನ ಒಕ್ಕ-ಕುದ್ಕೋಳಿ ರಸ್ತೆ, ಸುಲ್ಕೇರಿಮೊಗ್ರು ಶಾಲೆಯಿಂದ ನಾವರ ಕೇಡೇಲು ರಸ್ತೆ ದುರಸ್ತಿ, ಶಿರ್ಲಾಲು ಗ್ರಾಮದ ಶಾಲೆಯಿಂದ ಹಂಡೇಲು ಬೈಲು ರಸ್ತೆ, ಮಂಜೋಟ್ಟಿ ಮಂಜಿಲ ರಸ್ತೆಯಲ್ಲಿ ಎರಡು ಮೋರಿ ಮತ್ತು ರಸ್ತೆ ದುರಸ್ತಿ, ನಾವೂರು ಗ್ರಾಮದ ಪಿಲಗೂಡುನಿಮದ ಎರ್ಮಲೆ ರಸ್ತೆ ದುರಸ್ತಿ, ಪಂಚಾರ್ ನಿಂದ ಮಂಜಿಲ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದೇ ಮಾದರಿಯಲ್ಲಿ 10-11ನೇ ಸಾಲಿನ ಗಿರಿಜನ ಉಪಯೋಜನೆಯಡಿ ಚಾರ್ಮಡಿಯ ಅನ್ನಾರು ಕಾಲನಿಗೆ ಸೇತುವೆ, ನಾರಾವಿಯ ಕುತ್ಲೂರಿನ ಅಲಂಬ ವ್ಯಾಪ್ತಿಯ ರಸ್ತೆ ಅಭಿವೃದ್ದಿಗೆ, ಶಿರ್ಲಾಲು, ಇಂದಬೆಟ್ಟು, ನಾರಾವಿ, ನಾವರ, ಸುಲ್ಕೇರಿ ಮೊಗ್ರುವಿನಲ್ಲಿ ಸೋಲಾರ್ ದೀಪ ಅಳವಡಿಸಲು ಐಟಿಡಿಪಿ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಇಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಯೋಜನೆಗಳ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಭಿಷೇಕ್ ಗೋಯಲ್ ಅವರು ಸಭೆಯಲ್ಲಿ ಮಾಹಿತಿ ಮಂಡಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಬೆಳ್ತಂಗಡಿ ತಹಸೀಲ್ದಾರ್ ಶ್ರೀಮತಿ ಕುಸುಮಾ ಅವರಿಂದ ಸ್ಥಳೀಯ ಮಾಹಿತಿಯನ್ನು ಪಡೆದರು. ಈ ಪ್ರದೇಶಗಳ 237 ಸೋಲಾರ್ ಲ್ಯಾಂಪ್ ಗಳು ರಿಪೇರಿಯಾಗಬೇಕಿದ್ದು, ಕ್ರಮದ ಬಗ್ಗೆ ಸೂಚಿಸಿದರು. ಉಕ್ಕಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಬಗ್ಗೆ, ನುಜೋಡಿಯಲ್ಲಿ ಅಂಗನವಾಡಿ ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಮತ್ತು ಪಶುವೈದ್ಯಕೀಯ ಇಲಾಖೆಯವರು ಇಲ್ಲಿನ ಸ್ಥಳೀಯರಿಗೆ ತರಬೇತಿ ನೀಡುವ ಬಗ್ಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಲು ಅವರಿರುವ ಸ್ಥಳಕ್ಕೇ ತೆರಳಿ ಗುರುತಿಸಿ ಅವರಿಗೆ ತರಬೇತಿ ನೀಡಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಪುತ್ತೂರು ಸಹಾಯಕ ಆಯುಕ್ತರಾದ ಪ್ರಸನ್ನ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.