Friday, July 27, 2012

ಕಿರು ಜಲ ವಿದ್ಯುತ್ ಯೋಜನೆಗೆ ಚಾಲನೆ

ಮಂಗಳೂರು.ಜುಲೈ.27: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮಪಂಚಾಯತ್ ನ ನಾವೂರು ಗ್ರಾಮದ ಪುಳಿತಡಿಯ 5 ಮನೆಗಳಿಗೆ ಕಿರು ಜಲವಿದ್ಯುತ್ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ನೀಡಲಾಯಿತು.
ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇದುವರೆಗೆ ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ ನಿವಾಸಿಗಳಿಗಾಗಿ ಜನಸಂಪರ್ಕ ಸಭೆಯಲ್ಲಿ ನೀಡಿದ ಆಶ್ವಾಸನೆಯಂತೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದಿನ ವಿದ್ಯುತ್ ಸಂಪರ್ಕ ಯೋಜನೆ ತಮಗೆ ತೃಪ್ತಿ ತಂದಿದೆ ಎಂದರು.
ನಾಲ್ಕು ಲಕ್ಷ ರೂ.ಗಳ ವೆಚ್ಚದಲ್ಲಿ ಈ ಕಿರು ಜಲವಿದ್ಯುತ್ ಯೋಜನೆಯನ್ನು ಆರಂಭಿಸಲಾಗಿದ್ದು, ಕುತ್ಲೂರಿನ 25 ಮನೆಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕವನ್ನು ಶೀಘ್ರದಲ್ಲೇ ನೀಡಲಾಗುವುದು. ಎಳನೀರಿನಲ್ಲಿ ವಾಸಿಸುವವರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ಈ ಪ್ರದೇಶಕ್ಕೆ ವಿಶೇಷ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗಿದೆ. ಸ್ಥಳೀಯ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ನೀಡುವಲ್ಲೂ ಆದ್ಯತೆ ನೀಡಲಾಗಿದೆ. ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಲು ಆದ್ಯತೆ ನೀಡಲಾಗುವುದು. ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್.ವಿಜಯಪ್ರಕಾಶ್ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.