Saturday, July 28, 2012

ಐದು ಕೊರಗ ಕುಟುಂಬಗಳಿಗೆ ಚೆಕ್ ವಿತರಣೆ

ಮಂಗಳೂರು,ಜುಲೈ.28 : ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಪಸಭಾಪತಿ ಎನ್ ಯೋಗೀಶ್ ಭಟ್ ಅವರು ತಲಾ 39,000 ರೂ.ಗಳ ಚೆಕ್ ನ್ನು ಐದು ಕೊರಗ ಕುಟುಂಬಗಳಿಗೆ ಪಾವತಿಸಿದರು.
ನಗರದ ನಂತೂರು ಜಂಕ್ಷನ್ ಬಳಿಯ ಎನ್ ಹೆಚ್ 169 ರಸ್ತೆ ಅಗಲೀಕರಣ ವೇಳೆ ಮನೆ ತೆರವು ಗೊಳಿಸಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ 6 ಕೊರಗ ಕುಟುಂಬಗಳಿಗೆ ಐಟಿಡಿಪಿ ಇಲಾಖೆ ವತಿಯಿಂದ ಬಾಡಿಗೆ ಹಣವನ್ನು ನೀಡಲಾಯಿತು.
ಇವರಿಗಾಗಿ ಕಣ್ಣ ಗುಡ್ಡೆಯಲ್ಲಿ ಐದು ಸೆನ್ಸ್ ಜಾಗ ಗುರುತಿಸಿದ್ದು, 1.15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಬಗ್ಗೆಯೂ ಸಭೆ ನಿರ್ಧರಿಸಿತು. 270 ಚದರ ಅಡಿ ವಿಸ್ತೀರ್ಣದ ಹಾಲ್, ಬೆಡ್ ರೂಂ, ಅಡುಗೆಮನೆ, ಬಾತ್ ರೂಂ ಮತ್ತು ಶೌಚಾಲಯವನ್ನು ಒಳಗೊಂಡ ಮನೆಯನ್ನು ಗೋಕುಲ ನಿರ್ಮಾಣ ಸಂಸ್ಥೆಯವರ ಮೂಲಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಐಟಿಡಿಪಿ ಅಧಿಕಾರಿ ಸಾಬಿರ್ ಅಹ್ಮದ್ ಮುಲ್ಲಾ ಅವರು ಇಂದು ಕಾವಳಕಟ್ಟೆಯಲ್ಲಿ ಈಗಾಗಲೇ ಈ ಸಂಸ್ಥೆಯವರು ನಿರ್ಮಿಸಿರುವ ಮನೆಗಳನ್ನು ತೋರಿಸಲು ಕೊರಗ ಕುಟುಂಬದವರನ್ನು ಸ್ಥಳಕ್ಕೆ ಕರೆದೊಯ್ದರು. ಇದೇ ಮಾದರಿ ಮನೆ ಅವರಿಗಿಷ್ಟವಾದರೆ ತಕ್ಷಣವೇ ನಿರ್ಮಿಸಿಕೊಡಲಾಗುವುದೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದರು.
ಸುಮಾರು ನಾಲ್ಕೈದು ವರ್ಷಗಳಿಂದ ಬಾಕಿ ಉಳಿದ ಈ ಕುಟುಂಬಗಳ ಸಮಸ್ಯೆ ಮುಂದಿನ ಎರಡು ತಿಂಗಳಲ್ಲಿ ಬಗೆಹರಿಯಲಿದೆ. ಮನೆಗೆ ರಸ್ತೆ ಮತ್ತು ವಿದ್ಯುತ್ ನ್ನು ಬೇರೆ ಯೋಜನೆಗಳ ಮೂಲಕ ಒದಗಿಸಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಶ್ರೀಮತಿ ಶಶಿಕಲಾ, ವಸಂತಿ, ವಸಂತಿ ಶೀನ, ಮೀನ, ಅಮ್ಮಣ್ಣಿ ಅವರು ಇಂದು ಚೆಕ್ ಪಡೆದರು. 19 ತಿಂಗಳ ಬಾಡಿಗೆ ಹಣವನ್ನು ಅವರಿಗೆ ಪಾವತಿಸಲಾಗಿದೆ. ಆರು ಕುಟುಂಬಗಳು ಐದು ಮನೆಗಳಲ್ಲಿ ವಾಸವಾಗಿವೆ.