Saturday, July 14, 2012

ಕಾಲಮಿತಿಯೊಳಗೆ ಕೊರಗರಿಗೆ ಮನೆ: ಜಿಲ್ಲಾಧಿಕಾರಿ

ಮಂಗಳೂರು. ಜುಲೈ.14 : ಪಡಿತರ ವಿತರಣೆ, ಸಾಮಾಜಿಕ ಭದ್ರತೆ ಮತ್ತು ನಿವೇಶನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸಿ ಸಮಸ್ಯೆಗಳ ಪರಿಹಾರಕ್ಕೆ ಗರಿಷ್ಠ ಯತ್ನ ನಡೆಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು.
ಜುಲೈ 13 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದ್ದು, ಎಲ್ಲರ ಸಹಕಾರದಿಂದ ಸಮಸ್ಯೆ ಪರಿಹರಿಸಲು ಶ್ರಮಿಸಲಾಗುವುದು. ಜಿಲ್ಲೆಯ ಕೊರಗರಿಗೆ ಕಾಲಮಿತಿಯೊಳಗೆ ಮನೆ ನಿರ್ಮಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ನಂತೂರಿನಿಂದ ಒಕ್ಕಲೆಬ್ಬಿಸಿದವರಿಗೆ ಸೂಕ್ತ ಪರಿಹಾರ ನೀಡಿದ್ದು, ಒಂದುಲಕ್ಷದ ಇಪ್ಪತ್ತೈದು ಸಾವಿರ ರೂ.ಗಳಂತೆ 6 ಕುಟುಂಬಕ್ಕೆ ಮನೆ ನಿರ್ಮಿಸಲಾಗುವುದು.
ಜಿಲ್ಲೆಯಲ್ಲಿ ವಸತಿ ಇಲ್ಲದವರಿಗೆ ಭೂಮಿ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. 446 ಕುಟುಂಬಗಳಿಗೆ ಸ್ವಂತ ಭೂಮಿ ಇದ್ದು, ಅರಣ್ಯ ಭೂಮಿಯಲ್ಲಿ 10 ಕುಟುಂಬಗಳಿವೆ. ಸರ್ಕಾರಿ ಭೂಮಿಯಲ್ಲಿ 305 ಮತ್ತು ಇತರ ಖಾಸಗಿ ಜಾಗಗಳಲ್ಲಿ 174 ಕುಟುಂಬಗಳು ವಾಸಿಸುತ್ತಿವೆ. ಖಾಸಗಿ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ಗುರುತಿಸಲು ಐಟಿಡಿಪಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಆಗಸ್ಟ್ 15ರೊಳಗೆ ನಿರ್ವಸಿತರನ್ನು ಗುರುತಿಸಿ ಕಡಿಮೆ ವೆಚ್ಚ ಹಾಗೂ ಉತ್ಕೃಷ್ಟ ಗುಣಮಟ್ಟದೊಂದಿಗೆ ಮನೆ ನಿರ್ಮಿಸಲು ಏಜೆನ್ಸಿ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಆಶ್ರಯ ಮತ್ತು ಶಾಲೆಗಳ ಗಡಿಗುರುತಿಗೆ ಜಮೀನನ್ನು ಸರ್ವೇ ಮಾಡಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸರ್ವೇಯರ್ ಗಳನ್ನು ಕಾಲಮಿತಿಯೊಳಗೆ ಒದಗಿಸಿಕೊಡಲಾಗುವುದು ಎಂದರು.
ಜಿಲ್ಲೆಯಲ್ಲಿ ನಿವೇಶನ ಲಭ್ಯತೆಯಲ್ಲಿ ಸಮಸ್ಯೆಗಳಿದ್ದರೆ, ಹಣ ಕೊಟ್ಟು ಖರೀದಿಸುವ ಅವಕಾಶವೂ ಇದೆ ಎಂದ ಜಿಲ್ಲಾಧಿಕಾರಿಗಳು, ಪಡಿತರ ಚೀಟಿ ವಿತರಣೆ ಲೋಪ ಪರಿಹರಿಸಲು ಪ್ರತೀ ಶನಿವಾರ ತಹಸೀಲ್ದಾರ್ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸಭೆ ಸೇರಿ ಎಂಬ ಸಲಹೆಯನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್, ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮೀ ಜನಾರ್ಧನ್, ಸ್ಥಾಯಿ ಸಮಿತಿ ಸದಸ್ಯರಾದ ಜನಾರ್ಧನ ಗೌಡ, ಈಶ್ವರ ಕಟೀಲ್ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ನಿವೇಶನಕ್ಕೆ ಸಂಬಂಧಿಸಿದಂತೆ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.