Thursday, July 26, 2012

ಕಾರ್ಮಿಕ ಇಲಾಖೆಯಿಂದ ಅಪಘಾತ ಪರಿಹಾರ ಯೋಜನೆ

ಮಂಗಳೂರು,ಜುಲೈ.26: ರಾಜ್ಯ ಸರ್ಕಾರ 'ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ' ಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಜಾರಿಗೊಳಿಸಿದೆ.
ಜಿಲ್ಲೆಯಲ್ಲಿ ವಾಣಿಜ್ಯ ಚಾಲನಾ ಪರವಾನಗಿ ಪಡೆದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ ವಾಹನ ಚಾಲಕರಿಗೆ ಯೋಜನೆ ಅನ್ವಯವಾಗಲಿದ್ದು, ಫಲಾನುಭವಿಯು ಪ್ರೀಮಿಯಂ ಮೊತ್ತ ಪಾವತಿಸಬೇಕಾಗಿರುವುದಿಲ್ಲ. ಯೋಜನೆಯು ಸಂಪೂರ್ಣ ಉಚಿತವಾಗಿದ್ದು, ಸರ್ಕಾರವೇ ಪೂರ್ಣವಾಗಿ ಪ್ರೀಮಿಯಂ ಮೊತ್ತವನ್ನು ಪಾವತಿಸಲಿದೆ.
ಅಪಘಾತದಿಂದ ಚಾಲಕನು ಪ್ರಾಣಾಪಾಯಕ್ಕೆ ತುತ್ತಾದಾಗ, ಚಾಲಕರು ಶಾಶ್ವತ ದುರ್ಬಲತೆ ಹೊಂದಿದಾಗ, ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ, ಅಂಗಗಳು ಹಾನಿಯಾದಗ, ಚಾಲಕರು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಅಪಘಾತಕ್ಕೀಡಾಗಿ ಮರಣ ಹೊಂದಿದಲ್ಲಿ ಅಥವಾ ಶಾಶ್ವತ, ತಾತ್ಕಾಲಿಕ ದುರ್ಬಲತೆ ಹೊಂದಿದಾಗ ಯೋಜನೆಯ ಸೌಲಭ್ಯ ಲಭ್ಯವಾಗುತ್ತದೆ.
ಅಪಘಾತ ವಿಮೆ ಪಡೆಯಲು- ಚಾಲಕರು ಚಾಲ್ತಿಯಲ್ಲಿರುವ ವಾಣಿಜ್ಯ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು. ಸದರಿ ಯೋಜನೆಯಡಿ ನೋಂದಣಿಯಾದ ಚಾಲಕರು ಒಂದು ಬಾರಿ 25/- ನೋಂದಣಿ ಶುಲ್ಕವನ್ನು ಪಾವತಿಸಬೇಕು. 20ರಿಂದ 70 ವರ್ಷಗಳೊಳಗಿನವರು. ವಿಮಾ ಮೊತ್ತ ಗರಿಷ್ಠ 2 ಲಕ್ಷ ರೂ., ಈ ಯೋಜನೆಯಡಿ ನೋಂದಾಯಿತರಾದ ಚಾಲಕರು ಮರಣ ಹೊಂದಿದಲ್ಲಿ ಮೃತರ ನಾಮ ನಿರ್ದೇಶಿತರು ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ಅರ್ಜಿಯೊಂದಿಗೆ ಫಲಾನುಭವಿಗಳು ಚಾಲನಾ ಪರವಾನಿಗೆ ಪ್ರತಿ, ವಾಸಸ್ಥಳದ ದೃಢೀಕರಣದ ಪ್ರತಿ ಮತ್ತು ಒಂದು ಕಲರ್ ಭಾವಚಿತ್ರ ನೀಡಬೇಕು. ಅರ್ಜಿಗಳು ಜಿಲ್ಲೆಯ ಎಲ್ಲ ನೆಮ್ಮದಿ ಕೇಂದ್ರಗಳಲ್ಲಿ ದೊರೆಯುತ್ತದೆ. ಅರ್ಜಿ ಭರ್ತಿ ಮಾಡಿ ನೆಮ್ಮದಿ ಕೇಂದ್ರಗಳಲ್ಲಿ ನೀಡಬಹುದು. ಚಾಲಕರು ಚಾಲಕ ಸಂಘದ ಪ್ರತಿನಿಧಿಗಳು ಅಥವಾ ಜಿಲ್ಲಾ ವ್ಯವಸ್ಥಾಪಕರು ನೆಮ್ಮದಿ ಕೇಂದ್ರ ಮಂಗಳೂರು ಮೊಬೈಲ್ 8861308842. ಅಥವಾ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಕಾರ್ಮಿಕ ಅಧಿಕಾರಿ ಡಿ ಜಿ ನಾಗೇಶ್ ಅವರು ತಿಳಿಸಿದ್ದಾರೆ.