Thursday, July 5, 2012

ಮುಲ್ಲಕಾಡು ಶಾಲೆಯಲ್ಲಿ ಎಡಿಸಿ ಪ್ರಮಾಣವಚನ ಬೋಧನೆ

ಮಂಗಳೂರು, ಜುಲೈ.05 :'ಬಾಲ್ಯಾವಸ್ಥೆ ವ್ಯಕ್ತಿಯ ಜೀವನದ ಅತ್ಯಂತ ಸುಂದರವಾದ ಮತ್ತು ನವಿರಾದ ಅವಸ್ಥೆ. ಇಲ್ಲಿ ದೊರೆಯುವ ಸಂಸ್ಕಾರದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ನಂಬುತ್ತೇನೆ. ಶಾಲಾ ಶಿಕ್ಷಣ ಪ್ರತಿಯೊಬ್ಬ ಮಗುವಿಗೆ ದೊರೆಯುವಂತೆ ಮಾಡಲು ಮಗು ನಿರಂತರವಾಗಿ ಶಾಲೆಗೆ ಬರುವಂತೆ ಮಾಡಲು ಮತ್ತು ಮಕ್ಕಳು ಕಲಿಯಲು ಬೇಕಾದ ವಾತಾವರಣ ನಿರ್ಮಿಸಲು ಶ್ರಮಿಸುತ್ತೇನೆ.
ವಿದ್ಯಾರ್ಥಿ ಸ್ವಭಾವವು ಸಮಾಜ ಮುಖಿಯಾಗಿ ಇರುವಂತೆ ಮಾಡಲು ನಾನು ಶಿಶುಸ್ನೇಹಿ ವಿಧಾನಗಳನ್ನು ಮಾತ್ರ ಬಳಸುತ್ತೇನೆ ಎಂದು ಮತ್ತು ಇತರರು ಇದೇ ರೀತಿ ಮಾಡಲು ಪ್ರೇರೇಪಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.'
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು 'ಶಾಲೆಗಾಗಿ ನಾವು ನೀವು' ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯ ಮಾದರಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮುಲ್ಲಕಾಡು ಶಾಲೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಇಂದು ಶಾಲೆಯ ಮಕ್ಕಳು, ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರಿಗೆ ಮೇಲಿನಂತೆ ಪ್ರಮಾಣವಚನ ಬೋಧಿಸಿದರು.
ಶಾಲೆಗಳಿರುವುದು ವಿದ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ ಮಾತ್ರ ಎಂಬ ಭಾವನೆ ತೊರೆದು ನಮ್ಮ ಶಾಲೆ ಎಂಬ ಮನೋಭಾವ ಪೋಷಕರಲ್ಲಿ ಮೂಡಬೇಕು. ನಾಗರಿಕರು ಶಾಲೆ ನಮ್ಮದು; ಎಲ್ಲ ಮಕ್ಕಳು ಶಾಲೆಗೆ ಹೋಗಬೇಕು ಎಂಬ ವಿಷಯದ ಬಗ್ಗೆ ಗಮನಹರಿಸಿದಾಗ ಮಕ್ಕಳ ಹಕ್ಕು ಕಾಯಿದೆ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿಗಳು ನುಡಿದರು.
ಹೆತ್ತವರು, ಶಿಕ್ಷಕರು, ಸಮಾಜ ಮಕ್ಕಳ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಸರ್ಕಾರಿ ಶಾಲೆಗಳು ಅಭಿವೃದ್ದಿಯಾಗುತ್ತವೆ; ಕುಂದುಕೊರತೆಗಳಿದ್ದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿಗಳು ನುಡಿದರು.
ತಾವು ಚಿಕ್ಕಮಗಳೂರಿನ ಹಳ್ಳಿಯಲ್ಲಿ ಶಿಕ್ಷಕನಾಗಿದ್ದ ಅವಧಿಯನ್ನು ಸ್ಮರಿಸಿದ ಅವರು, ಹೆತ್ತವರು ಅನಕ್ಷರಸ್ಥರಾಗಿದ್ದರೂ ತಮ್ಮ ಮಕ್ಕಳ ಓದಿನ ಬಗ್ಗೆ ಇರಿಸಿದ್ದ ಕಾಳಜಿಯಿಂದಾಗಿ ತಾನು ಇಂದು ಜಿಲ್ಲಾ ಮಟ್ಟದ ಅಧಿಕಾರಿಯಾದುದನ್ನು ವಿವರಿಸಿ ಮಕ್ಕಳಿಗೆ ಸ್ವಪ್ರೇರಣೆಯಾದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ ಅವರು ಶಾಲೆಯ ಅಸೆಂಬ್ಲಿ ನಡೆಯವ ರೀತಿ, ಸರ್ವಶಿಕ್ಷಣ ಅಭಿಯಾನದಡಿ ದೊರೆತ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡ ಬಗ್ಗೆ ಹಾಗೂ ಎಸ್ ಡಿ ಎಂಸಿ ಸದಸ್ಯರ ಸಹಕಾರ, ಕಾರ್ಪೋರೇಟರ್ ನೆರವು ಹಾಗೂ ದಾನಿಗಳು ನೀಡಿದ ನೆರವನ್ನು ಸ್ಮರಿಸಿದರು.
ಸರ್ವಶಿಕ್ಷಣ ಅಭಿಯಾನದ ಸಹಾಯಕ ಯೋಜನಾಧಿಕಾರಿ ಶಿವಪ್ರಕಾಶ್ ಅವರು ಮಕ್ಕಳ ಹಕ್ಕು ಶಿಕ್ಷಣ ಕಾಯಿದೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಪೋರೇಟರ್ ದೀಪಕ್ ಪೂಜಾರಿ, ನಾಮ ನಿರ್ದೇಶನ ಸದಸ್ಯರಾದ ಸುಚೇತನ್ ಪೂಜಾರಿ,ನಿವೃತ್ತ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ರೈ, ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂಜೀವ ಟೈಲರ್, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳ, ಪ್ರೌಢಶಾಲಾ ಅಧ್ಯಕ್ಷ ಮಹಮ್ಮದ್, ಮಕ್ಕಳ ಹೆತ್ತವರು ಅರ್ಥಪೂರ್ಣ ಸಮಾರಂಭಕ್ಕೆ ಸಾಕ್ಷಿಯಾದರು.