Tuesday, March 30, 2010

ದಕ್ಷಿಣ ಕನ್ನಡ ಜಿಲ್ಲೆಗೆ 3581 ಕೋಟಿ ರೂ. ಸಾಲ ಯೋಜನೆ

ಮಂಗಳೂರು,ಮಾರ್ಚ್ 30:ದಕ್ಷಿಣ ಕನ್ನಡ ಜಿಲ್ಲೆಗೆ 2010-11ನೇ ಸಾಲಿಗೆ 3581 ಕೋಟಿ ರೂ. ಜಿಲ್ಲಾ ಸಾಲ ಯೋಜನೆ ರೂಪಿಸಲಾಗಿದೆ. ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ನಡೆದ ವಿಶೇಷ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ಸಾಲ ಯೋಜನೆ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಕಳೆದ ಸಾಲಿನಲ್ಲಿ 3007 ಕೋಟಿ ಸಾಲ ಯೋಜನೆ ಬಿಡುಗಡೆ ಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 3581 ಕೋಟಿ ರೂ.ಗಳಷ್ಟು ಹೆಚ್ಚು ಸಾಲ ಯೋಜನೆ ಸಿದ್ಧವಾಗಿದೆ. ಈ ಬಾರಿ ಆದ್ಯತಾ ವಲಯಕ್ಕೆ ಯೋಜನೆಯ ಶೇಕಡಾ 76 ರಷ್ಟು ಮೊತ್ತವನ್ನು ಮೀಸಲಿರಿಸಿದ್ದು, ಒಟ್ಟು 2726 ಕೋಟಿ ರೂ. ಕಾಯ್ದಿರಿಸಲಾಗಿದೆ. ಕೃಷಿ ವಲಯಕ್ಕೆ 1110 ಕೋ.ರೂ.,(ಶೇ.31) ನಿಗದಿಪಡಿಸಿದೆ. ಸಣ್ಣ ಕೈಗಾರಿಕೆಗೆ 431 ಕೋಟಿ ರೂ., ಇನ್ನಿತರ ಆದ್ಯತಾವಲಯಕ್ಕೆ 1185 ಕೋಟಿ ರೂ., ಹಾಗೂ ಆದ್ಯತೇತರ ವಲಯಕ್ಕೆ 855 ಕೋಟಿ ರೂ.,ಮೀಸಲಿರಿಸಿದೆ. ವಾಣಿಜ್ಯ ಬ್ಯಾಂಕುಗಳು ಒಟ್ಟು 2792ಕೋಟಿರೂ., ಸಾಲಯೋಜನೆ ನಿಗದಿಪಡಿಸಿದ್ದು ಇದು ಯೋಜನೆಯ ಶೇ.78 ರಷ್ಟಾಗಿದೆ. ಲೀಡ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ 80 ಕೋಟಿ ರೂ., ಹಾಗೂ ಎಸ್ ಸಿ ಡಿಸಿಸಿ ಬ್ಯಾಂಕ್ 700 ಕೋಟಿರೂ., ಮತ್ತು ಕೆನರಾ ಬ್ಯಾಂಕ್ 488 ಕೋಟಿ ಯೋಜನೆ ರೂಪಿಸಿದೆ. ಸರ್ಕಾರದ ಪ್ರಾಯೋಜಿತ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಬ್ಯಾಂಕುಗಳು ಸಮರ್ಪಕ ಯೋಜನೆ ರೂಪಿಸಿದ್ದು, ಒಟ್ಟು 75 ಕೋಟಿ ರೂ.,ಗಳನ್ನು ಮೀಸಲಿರಿಸಿದೆ.
ಜಿಲ್ಲೆಯಲ್ಲಿ 2009ರ ವೇಳೆಗೆ 21,379 ಕೋಟಿ ರೂ.,ಗಳ ವಹಿವಾಟನ್ನು ನಡೆಸಿದ್ದು,ಇಲ್ಲಿನ 407 ಬ್ಯಾಂಕ್ ಶಾಖೆಗಳಲ್ಲಿ 13,782ಕೋಟಿ ರೂ., ಠೇವಣಿ ಹಾಗೂ 7597 ಕೋಟಿ ರೂ.,ಮುಂಗಡ ಸೇರಿದೆ ಎಂದು ಲೀಡ್ ಬ್ಯಾಂಕಿನ ಉಪಮಹಾಪ್ರಬಂಧಕ ಸುಜೀರ್ ಪ್ರಭಾಕರ ಅವರು ಮಾಹಿತಿ ನೀಡಿದರು. ಜಿಲ್ಲಾ ಸಾಲ ಯೋಜನೆ 2009-10 ರಡಿ ಮೂರನೇ ತ್ರೈಮಾಸಿಕದಲ್ಲಿ 2340 ಕೋಟಿ ರೂ., ಸಾಧನೆಗೆ ಗುರಿ ನಿಗದಿಯಾಗಿದೆ. 2065 ಕೋಟಿ ರೂ., ಸಾಲ ಬಿಡುಗಡೆಯಾಗಿದೆ.2009ರ ಡಿಸೆಂಬರ್ ವರೆಗೆ ತ್ರೈಮಾಸಿಕ ಗುರಿಯ ಶೇ.88 ಸಾಧನೆಯಾಗಿದೆ. ಆದ್ಯತಾ ವಲಯದ ಸಾಲ ಯೋಜನೆಯಡಿ 1737 ಕೋ.ರೂ., ಗುರಿ ನಿಗದಿಯಾಗಿದ್ದು, ಇದರಲ್ಲಿ 1412 ಕೋಟಿ ರೂ., ವಿತರಿಸಿ ಶೇ.83 ಗುರಿ ಸಾಧಿಸಲಾಗಿದೆ. ಕೃಷಿಗೆ 775 ಕೋಟಿ ರೂ., ಸಣ್ಣ ಕೈಗಾರಿಕೆಗೆ 210 ಕೋಟಿ ರೂ., ಇತರ ಆದ್ಯತಾ ನಲಯಕ್ಕೆ 427 ಕೋಟಿ ರೂ., ಸಾಲ ನೀಡಲಾಗಿದೆ.
ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಉದಯ ಕುಮಾರ್ ಹೊಳ್ಳ ಸ್ವಾಗತಿಸಿದರು. ನಬಾರ್ಡ್ ನ ಎಜಿಎಂ ಕೆ.ಪಿ. ಉಡುಪ, ಜಿ.ಪಂ. ಯೋಜನಾ ನಿರ್ದೇಶಕರಿ ಸೀತಮ್ಮ ಅವರು ಉಪಸ್ಥಿತರಿದ್ದರು.