Saturday, March 27, 2010

ಸಾರ್ವಜನಿಕರ ಅನುಕೂಲಕ್ಕೆ ವೋಲ್ವೋ ಬಸ್:ಪಾಲೆಮಾರ್

ಮಂಗಳೂರು, ಮಾರ್ಚ್27:ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಲ್ದಾಣದಿಂದ ಮುಲ್ಕಿ,ಪಡುಬಿದ್ರಿ,ಉಡುಪಿ ಮಾರ್ಗದಲ್ಲಿ ಮಣಿಪಾಲಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಆರಂಭಿಸಲಾಗಿರುವ 6 ಅತ್ಯಾಧುನಿಕ ತಾಂತ್ರಿಕತೆಯ ಲೋಫ್ಲೋರ್ ಹವಾನಿಯಂತ್ರಿತ ವೋಲ್ವೋ ಬಸ್ಸುಗಳಿಗೆ ಜೀವಿಶಾಸ್ತ್ರ,ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಇಂದು ಬೆಳಗ್ಗೆ 10.30 ಕ್ಕೆ ಚಾಲನೆ ನೀಡಿದರು.
ಜನರ ಬೇಡಿಕೆಯನ್ನು ಗಮನದಲ್ಲಿರಿಸಿ ಬಸ್ಸು ಸೇವೆ ಆರಂಭಿ ಸಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ವಿರುವಲ್ಲಿ ಹಂತ ಹಂತವಾಗಿ ಈ ಸೇವೆಯನ್ನು ವಿಸ್ತರಿಸ ಲಾಗುವುದು, ಶೀಘ್ರದಲ್ಲೇ ನೆರೆಯ ಕಾಸರ ಗೋಡಿಗೂ ಇದೇ ಮಾದರಿಯ ವೋಲ್ವೋ ಬಸ್ಸುಗಳ ಸೇವೆಯನ್ನು ನೀಡಲಾಗುವುದು; ಜನರು ಸೌಲಭ್ಯದ ಸದ್ಬಳಕೆಯನ್ನು ಮಾಡಬೇಕೆಂದ ಸಚಿವರು, ಮಧ್ಯಮದ ವರ್ಗದ ಜನತೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಮಂಗಳೂರಿನಿಂದ ಮಣಿಪಾಲಕ್ಕೆ 60 ರೂ., ಉಡುಪಿಗೆ 55 ರೂ., ಪಡುಬಿದ್ರೆಗೆ 40 ರೂ.,ಮುಲ್ಕಿಗೆ 35 ರೂ.,ಸುರತ್ಕಲ್ ಗೆ 20 ರೂ., ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ ಎಂದರು. ಮಣಿಪಾಲದಿಂದ ಉಡುಪಿಗೆ 10 ರೂ.,ಪಡುಬಿದ್ರೆಗೆ 30 ರೂ.,ಮುಲ್ಕಿಗೆ 40 ರೂ.,ಸುರತ್ಕಲ್ ಗೆ 50 ರೂ. ನಿಗದಿಯಾಗಿದೆ ಎಂದರು.
ವೋಲ್ವೋ ಸಾರಿಗೆಗಳು ನಗರದ ಸ್ಟೇಟ್ ಬ್ಯಾಂಕ್ ನಿಂದ ಮಣಿಪಾಲದ ನಡುವೆ ಬೆಳಗ್ಗೆ 7.30 ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ ಗಂಟೆಗೊಂದಾವರ್ತಿ ಓಡಾಟ ನಡೆಸಲಿವೆ. ಸುರತ್ಕಲ್, ಮುಲ್ಕಿ, ಪಡುಬಿದ್ರೆ ಹಾಗೂ ಉಡುಪಿಗಳಲ್ಲಿ ನಿಲುಗಡೆ ಇರುತ್ತದೆ. ಸುಖಾಸೀನ ಹಾಗೂ ಪರಿಸರಸ್ನೇಹಿ ಸೇವೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಗುಣಮಟ್ಟ ಹಾಗೂ ಮಿತವ್ಯಯಕಾರಿ ಸಾರಿಗೆ ಸೌಲಭ್ಯವನ್ನು ಒದಗಿಸುವ ಆಶಯದಿಂದ ಆರಂಭಿಸಲಾಗಿದೆ ಎಂದರು.
ಈ ವಾಹನದಲ್ಲಿ ಅಂಗವಿಕಲರು, ವೃದ್ಧರು ಹಾಗೂ ಮಕ್ಕಳಿಗೆ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹತ್ತಿ ಇಳಿಯಲು ಸಾಧ್ಯ ವಾಗುವಂತೆ ರಚಿಸ ಲಾಗಿದ್ದು, ಅಂಗವಿಕಲರು ತಮ್ಮ ಗಾಲಿ ಕುರ್ಚಿಯಲ್ಲಿ ನೇರವಾಗಿ ಬಸ್ಸಿನೊಳಗೆ ಹತ್ತುವ ಹಾಗೂ ಇಳಿಯುವ ಸೌಲಭ್ಯ ಒದಗಿಸಲಾಗಿದೆ. ಈ ಸಂದರ್ಭದಲ್ಲಿ ಮೇಯರ್ ರಜನಿದುಗ್ಗಣ್ಣ, ಉಪಮೇಯರ್ ರಾಜೇಂದ್ರ , ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಕರುಂಬಯ್ಯ,ಇತರ ಜನಪ್ರತಿನಿಧಿಗಳು,ಪಾಲಿಕೆ ಸದಸ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.