Friday, March 5, 2010

ಕ್ರೀಡಾಳುಗಳನ್ನು ಗುರುತಿಸಿ ಪ್ರೋತ್ಸಾಹಿಸಿ:ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ

ಮಂಗಳೂರು,ಮಾರ್ಚ್ 5: ನಮ್ಮ ರಾಜ್ಯದಲ್ಲಿ ಕ್ರೀಡಾಳುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ನಮ್ಮ ದೇಶದಲ್ಲಿ ಸರ್ಕಾರ ಕ್ರೀಡಾಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾಹವನ್ನು ನೀಡಿದ್ದರೂ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿಯವರು ಹೇಳಿದರು.
ಅವರಿಂದು ಜಿಲ್ಲಾ ಕ್ರೀಡಾ ಶಾಲೆಗಳ ಅಥ್ಲೆಟಿಕ್ ಮತ್ತು ವಾಲಿಬಾಲ್ ಕ್ರೀಡೆಗಳ ರಾಜ್ಯ ಮಟ್ಟದ ತರಬೇತಿ ಶಿಬಿರ ಮತ್ತು ಸ್ಪರ್ಧೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದಿನ ಪೀಳಿಗೆಯಲ್ಲಿ ಹುದುಗಿರುವ ಕ್ರೀಡಾಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕಿದ್ದು, ಸರ್ಕಾರದ ಸವಲತ್ತುಗಳನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ತರಬೇತುದಾರರು ಮಕ್ಕಳಿಗೆ ಉತ್ತಮ ರೀತಿಯ ತರಬೇತಿಯನ್ನು ನೀಡುವ ಬಗ್ಗೆಯೂ ಅವರು ಸಲಹೆ ಮಾಡಿದರು.ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಅವರು ಮಕ್ಕಳು ಶಿಬಿರದಲ್ಲಿ ಕಲಿತ ಉತ್ತಮ ವಿಚಾರಗಳನ್ನು, ಶಿಸ್ತು,ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿ ಎಂದು ಹಾರೈಸಿದರು. ಅಂತಾರಾಷ್ಟ್ರೀಯ ಕ್ರೀಡಾ ಪಟು ಎಂ.ಆರ್.ಪೂವಮ್ಮ ಅವರು ಗೆಲುವು-ಸೋಲುಗಳನ್ನು ಸಮಾನವಾಗಿ ಸ್ವೀಕರಿಸಿ ಸೋಲುಗಳಿಗೆ ಕುಗ್ಗದೆ ಮುನ್ನುಗ್ಗಿ ಎಂದರು. ಶಿಬಿರಾರ್ಥಿಗಳಾದ ಕೊಪ್ಪಳದ ಯಮನೂರಪ್ಪ ಹಾಗೂ ಉಡುಪಿಯ ಅನುಷಾ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಿರಿಯ ಕ್ರೀಡಾ ತರಬೇತುದಾರರಾದ ಶಿವಮೊಗ್ಗದ ಡೇವಿಡ್ ಪ್ರಕಾಶ್ ಅವರನ್ನು ಇದೇ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಪಾಂಡುರಂಗ ಗೌಡ ಅವರು ಸ್ವಾಗತಿಸಿದರು. ಸ್ಪರ್ಧಾ ವಿಜೇತ ಮಕ್ಕಳಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು.