Tuesday, March 30, 2010

'ಮಾದಕ ದ್ರವ್ಯ ವ್ಯಸನದಿಂದ ಯುವಶಕ್ತಿ ಅಶಕ್ತ'

ಮಂಗಳೂರು,ಮಾರ್ಚ್ 30:ಮಾಧ್ಯಮಗಳು ಧನಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಬೇಕು; ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಾದಕದ್ರವ್ಯ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮಾಡಬೇಕು ಎಂದು ಹಿರಿಯ ಪತ್ರಕರ್ತರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಹೇಳಿದರು.
ಅವರಿಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ನವದೆಹಲಿಯ ಸಮಾಜಿಕ ಭದ್ರತೆಯ ರಾಷ್ಟ್ರೀಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಾದಕದ್ರವ್ಯ ವ್ಯಸನದ ಬಗ್ಗೆ ಮಾಧ್ಯಮ ಜಾಗೃತಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿ ಯಿಂದ ಹಿಡಿದು ಕೌಟುಂಬಿಕ ಕಲಹ ದವರೆಗೆ ಮಾದಕ ದ್ರವ್ಯ ಕಾರಣ ವಾಗಿದ್ದು, ಒಟ್ಟು ಪರಿಣಾಮ ಮುಖ್ಯವಾಗಿ ಹೆಣ್ಮಕ್ಕಳು ಮತ್ತು ಸಮಾಜದ ಮೇಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಇನ್ನಷ್ಟು ಬೆಳಕು ಚೆಲ್ಲುವ ಅಗತ್ಯವಿದೆಯಲ್ಲದೆ, ಮಾನವೀಯ ವರದಿಗಳು ಪ್ರಕಟಗೊಳ್ಳಬೇಕು ಎಂದರು.ಮಾದಕ ದ್ರವ್ಯಗಳ ಪೂರೈಕೆ ತಡೆ ಬಗ್ಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳ ಬೇಕೆಂದು ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಯಶೀಲರಾವ್ ತಿಳಿಸಿದರು.ಸಮಾಜಕ್ಕಾಗಿ,ಸರ್ವರ ಹಿತಕ್ಕಾಗಿ ಮಾಡಬೇಕಾದ ಕೆಲಸವಿದಾಗಿದ್ದು, ಈ ಬಗ್ಗೆ ಹೆಚ್ಚು ಪ್ರಯತ್ನ ಶೀಲರಾಗ ಬೇಕೆಂದರು. ಪತ್ರಕರ್ತ ರೊನಾಲ್ಡ್ ಅನಿಲ್ ಫರ್ನಾಂಡೀಸ್ ಅವರು ವಿಷಯದ ಬಗ್ಗೆ ಪವರ್ ಪಾಯಿಂಟ್ ಪ್ರಸಂಟೇಷನ್ ನೀಡಿದರು. ಪತ್ರಕರ್ತ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ ಸ್ವಾಗತಿಸಿದರು.ನಗರದ ಬೆಸೆಂಟ್,ಸಂತ ಅಲೋಶಿಯಸ್ ಹಾಗೂ ಸುರತ್ಕಲಿನ ಗೋವಿಂದದಾಸ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.