Saturday, March 27, 2010

ಆರೋಗ್ಯ ಸೇವೆಗೆ ಜಿಲ್ಲೆಗೆ ಮತ್ತೆ ಏಳು 108 ವಾಹನ ಸೇರ್ಪಡೆ

ಮಂಗಳೂರು,ಮಾರ್ಚ್27: ಯಾವುದೇ ವ್ಯಕ್ತಿಯು ತುರ್ತು ಪರಿಸ್ಥಿತಿಯಲ್ಲಿದ್ದಾಗ ಅವರಿಗೆ ಉಚಿವಾಗಿ ತುರ್ತು ಆರೋಗ್ಯ ಸೇವೆ ದೊರಕಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ಏಳು 108 ಆಂಬುಲೆನ್ಸ್ ಗಳು ಸೇರ್ಪಡೆಗೊಂಡಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಕರೆ ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏಳು 108 ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಸಚಿವರು,ಗ್ರಾಮಾಂತರ ಜನರ ಆರೋಗ್ಯ ಸೇವೆಯನ್ನು ಗಮನದಲ್ಲಿರಿಸಿ ಇಂದಿನಿಂದ ಜಿಲ್ಲೆಯಲ್ಲಿ ಒಟ್ಟು 19 ಆಂಬುಲೆನ್ಸ್ ಗಳು ಕಾರ್ಯಾಚರಿಸಲಿವೆ ಎಂದು ತಿಳಿಸಿದರು. ಮಂಗಳೂರು ವೆನ್ಲಾಕ್, ಜಪೆ, ಮೂಡುಬಿದರೆ, ಉಳ್ಳಾಲ, ಸುರತ್ಕಲ್, ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು, ಉಪ್ಪಿನಂಗಡಿ, ಬಿ.ಸಿರೋಡು, ವಿಟ್ಲ,ಉಜಿರೆಯಲ್ಲಿ 108 ಕಾರ್ಯತತ್ಪರವಾಗಿದ್ದು,ಇಂದು ಚಾಲನೆ ದೊರೆತ ಆಂಬುಲೆನ್ಸ್ ಗಳು ಮುಲ್ಕಿ, ಕಡಬ, ಕಾಣಿಯೂರು, ನಾರಾವಿ, ವೇಣೂರು, ಪುಂಜಾಲಕಟ್ಟೆಯಲ್ಲಿ ಸೇವೆ ನೀಡಲಿದ್ದು, ಇನ್ನೊಂದಕ್ಕೆ ಸ್ಥಳ ನಿಗದಿಯಾಗಬೇಕಿದೆ. ಗ್ರಾಮೀಣರ ಆರೋಗ್ಯವನ್ನು ಗಮನದಲ್ಲಿರಿಸಿ ಆದಷ್ಟು ಶೀಘ್ರವಾಗಿ 104 ಆಂಬುಲೆನ್ಸ್ ಸೇವೆ ಕಾರ್ಯೋನ್ಮುಖವಾಗಲಿದ್ದು, ಈ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.
108 ಸೇವೆ ಯಾವುದೇ ಗಂಭೀರ ತುರ್ತು ಸ್ಥಿತಿಯಲ್ಲಿರುವ ಜನರಿಗಾಗಿ 24X7 ಸಿಗುವ ಉಚಿತ ಸೇವೆಯಾಗಿದ್ದು, ಯಾವುದೇ ಮೊಬೈಲ್ ಅಥವಾ ಲ್ಯಾಂಡ್ ಲೈನ್ ನಿಂದ ನೇರವಾಗಿ ಸಂಪರ್ಕಿಸಬಹುದು. ತಕ್ಷಣವೇ ಅಗತ್ಯ ಸ್ಥಳಕ್ಕೆ ಆಗಮಿಸುವ ಆಂಬುಲೆನ್ಸ್ ಸೇವೆಯ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಮಹಾನಗರಪಾಲಿಕೆಯ 24X7 ನೀರು ಪೂರೈಕೆ ಬಗ್ಗೆ, ಪರಿಸರಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಿಸಿದರು. ತುಂಬೆಯಲ್ಲಿ ವೆಂಟೆಡ್ ಡ್ಯಾಂ ನ್ನು ಎತ್ತರಿಸುವ ಬಗ್ಗೆ ಸುತ್ತಮುತ್ತಲ ಜನರಿಗೆ ಯಾವುದೇ ಭಯ ಬೇಡ; ಸಮಗ್ರ ಸಮೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರುವಾಗ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುಷ್ಠಾನಕ್ಕೆ ತರಲಾಗುವುದು ಎಂದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್,ಜಿಲ್ಲಾ ಪಂಚಾಯತ್ ಸಿಇಒ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗನ್ನಾಥ್ ಉಪಸ್ಥಿತರಿದ್ದರು.