Thursday, March 11, 2010

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24x7 ಆರೋಗ್ಯ ಸೇವೆ

ಮಂಗಳೂರು,ಮಾರ್ಚ್ 11:'ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ' ಎಂಬ ಧ್ಯೇಯವಾಕ್ಯದಡಿ ಆರಂಭವಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣರಿಗೆ ಆರೋಗ್ಯ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯ ಆಯ್ದ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಪ್ರಸೂತಿ ಸೇವೆ ನೀಡುವಂತೆ ವ್ಯವಸ್ಥೆಯನ್ನು ಉನ್ನತೀಕರಿಸಿದೆ.
ಮೂಲಭೂತ ಸೌಲಭ್ಯಗಳು ಸೇರಿದಂತೆ ಒಟ್ಟು 3 ಜನ ಶುಶ್ರೂಷಕಿಯರನ್ನು ಈ ಯೋಜನೆಯಡಿ ನೇಮಿಸಲಾಗಿದ್ದು, ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಮುಖ್ಯ ಕೇಂದ್ರದಲ್ಲಿ ಸದಾ ಲಭ್ಯರಿರುತ್ತಾರೆ. ಗರ್ಭಿಣಿಯರಿಗೆ(ಬಿಪಿಎಲ್ ಗೆ ಸೀಮಿತವಲ್ಲ) ಅಗತ್ಯ ಮಾಡಬೇಕಿರುವ ಎಲ್ಲ ಪರೀಕ್ಷೆಗಳನ್ನು ಈ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಮುಖ್ಯವಾಗಿ ದೇಶದಲ್ಲಿ ತಾಯಿ ಮರಣ ಮತ್ತು ಶಿಶುಮರಣ ತಡೆಗೆ ಆದ್ಯತೆ ನೀಡಲಾಗಿದ್ದು, ಈ ವ್ಯವಸ್ಥೆ ಜಾರಿಗೆ ಬಂದಂದಿನಿಂದ ಶೇಕಡ 47ರಿಂದ 44ರಷ್ಟು ಇಳಿಮುಖವಾಗಿದೆ. ಅತಿ ದುರ್ಗಮ ಪ್ರದೇಶಗಳಲ್ಲೂ ಇಂತಹ ಕೇಂದ್ರಗಳಿದ್ದು, ಜನರ ಅನುಕೂಲಕ್ಕಾಗಿ ಹಾಗೂ ಅಂತಹ ಪ್ರದೇಶಗಳಲ್ಲಿ ವೈದ್ಯರು ತಂಗುವಂತೆ ಪ್ರೋತ್ಸಾಹಿಸಲು ಹೆಚ್ಚಿನ ಸವಲತ್ತನ್ನು ಎನ್ ಆರ್ ಎಚ್ ಎಮ್ (ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ)ನಡಿ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಳ್ಯದ ಕೊಲ್ಲಮೊಗರು,ಬೆಳ್ತಂಗಡಿಯ ಕಣಿಯೂರು, ಹತ್ಯಡ್ಕ, ನೆರಿಯಾ,ಮಂಗಳೂರಿನ ನೆಲ್ಲಿಕಾರಿನಲ್ಲಿದೆ. ದುರ್ಗಮವೆಂದು ಗುರುತಿಸಲ್ಪಟ್ಟ 6 ಆರೋಗ್ಯ ಕೇಂದ್ರಗಳು ಬಂಟ್ವಾಳದ ಪೆರುವಾಯಿ, ಕಲ್ಲಡ್ಕ, ದೈವಸ್ಥಳ, ಪುತ್ತೂರಿನ ಶಿರಾಡಿ,ಕೊಳ್ತಿಗೆ, ಮಂಗಳೂರಿನ ಕೊಂಪದವಿನಲ್ಲಿ
ಆರೋಗ್ಯ ಕೇಂದ್ರಗಳು ನಿರಂತರವಾಗಿ ಕಾರ್ಯಾಚರಿಸುತ್ತಿದ್ದು ಸೆಪ್ಟೆಂಬರ್ 2008ರಿಂದ ಈ ಯೋಜನೆ ಜಾರಿಗೆ ಬಂದಿದೆ. ಆರೋಗ್ಯ ರಕ್ಷಾ ಸಮಿತಿಯ ಪಾತ್ರ ಇಲ್ಲಿ ಹಿರಿದಾಗಿದ್ದು,ಜನರಿಗೆ ಸೌಲಭ್ಯ ತಲುಪಿಸಲು ಈ ಸಮಿತಿಗಳೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರು ಅಧ್ಯಕ್ಷರಾಗಿದ್ದು, ಸ್ಥಳೀಯ ವೈದ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರಲ್ಲದೆ ಇತರ 8 ಜನರು ಈ ಸಮಿತಿಯಲ್ಲಿರುತ್ತಾರೆ. ಎನ್ ಆರ್ ಎಚ್ ಎಮ್ ನಡಿ ವೈದ್ಯಕೀಯ ಸೌಲಭ್ಯಕ್ಕೆ ಯಾವುದೇ ಕೊರತೆ ಇರುವುದಿಲ್ಲವಾದ್ದರಿಂದ ಜನರಿಗೆ ವೈದ್ಯಕೀಯ ನೆರವು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ ಜಿಲ್ಲೆಯ 13 ಆರೋಗ್ಯಕೇಂದ್ರಗಳಿಗೆ 108 ಸೌಲಭ್ಯವಿದ್ದು, ಇನ್ನು ಆರು 108 ಆಂಬುಲೆನ್ಸ್ ಗಳಿಗೆ ಬೇಡಿಕೆ ಇರಿಸಲಾಗಿದೆ.
ಇಂದು ಶಿರ್ತಾಡಿ ಮತ್ತು ಸುರತ್ಕಲ್ ನ 24x7 ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ಮತ್ತು ಡಾ. ಹೇಮಲತಾ ಅವರು ನೂತನ ವ್ಯವಸ್ಥೆಗಳು ಬಂದ ಬಳಿಕ ಆಸ್ಪತ್ರೆಗೆ ಬರುವ ಗರ್ಭಿಣಿಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.ಇದಲ್ಲದೆ ರೋಗಿಗಳ ಅನುಕೂಲಕ್ಕೆ ಹಣದ ಸಮಸ್ಯೆ ಇರುವುದಿಲ್ಲ ಎಂಬುದನ್ನು ವಿವರಿಸಿದರು. ಇದಲ್ಲದೆ ಗರ್ಭಿಣಿಯರಿಗೆ ರಾಜ್ಯ ಸರ್ಕಾರ ಪ್ರಸೂತಿ ಆರೈಕೆಯಡಿ ಆರ್ಥಿಕ ನೆರವು ನೀಡುತ್ತಿದ್ದು, 2008-09ರ ಸಾಲಿನಲ್ಲಿ 625 ಸುರಕ್ಷಿತ ಪ್ರಸವಗಳಾಗಿದೆ ಎಂದರು. ಉಜಿರೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳಲ್ಲಿ 40 ಕ್ಕೂ ಹೆಚ್ಚು ಹೆರಿಗೆಗಳಾಗಿದ್ದು, ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ನೇಮಿಸಲು ಸೂಚಿಸಿದ್ದಾರೆ ಎಂದು ಜಿಲ್ಲ ಯೋಜನಾ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್ ಕೆ.ಎಸ್ ವಿವರಿಸಿದರು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಷಿನ ಸಂಖ್ಯೆಯಲ್ಲಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬಹುದು.