Monday, August 2, 2010

ಸುಧಾಮರಿಗೆ ಆತ್ಮೀಯ ಬೀಳ್ಕೊಡುಗೆ

ಮಂಗಳೂರು, ಆಗಸ್ಟ್ 2: ಕೃಷಿ ಖುಷಿ ಕೊಡಲಿ-ಹರ್ಷ ಹಾಗೂ ಆರೋಗ್ಯಕರ ನಿವೃತ್ತಿ ಜೀವನ ಲಭ್ಯವಾಗಲಿ ಎಂದು ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಸುಧಾಮರಿಗೆ ಶುಭ ಹಾರೈಸಿದರು.ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕ ಕೃಷಿ ಮಾಡಲು ಹೊರಟಿರುವ ಜಿಲ್ಲಾಧಿಕಾರಿಗಳ ಕಚೇರಿಯ ಜಮೇದಾರ್ ಸುಧಾಮ ಅವರಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

34 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸುಧಾಮ ಅವರು 23 ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ 20 ಜಿಲ್ಲಾಧಿ ಕಾರಿಗಳ ಕೈಕೆಳಗೆ ಕರ್ತವ್ಯ ನಿರ್ವಹಿಸಿದ್ದಾರೆ. ವಿಟ್ಲ ಮೂಲದ ಇವರು ಪೊನ್ನುರಾಜ್ ಬಂದ ಬಳಿಕ ಒಂದೇ ದಿನ ರಜೆ ಪಡೆದಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕಚೇರಿಯಲ್ಲಿ ಕೆಲಸದಲ್ಲಿ ನಿರತವಾಗಿರುವ ಇವರ ನಿರ್ಲಿಪ್ತತೆ ಬಗ್ಗೆ ಜಿಲ್ಲಾಧಿಕಾರಿಗೆ ಹೆಮ್ಮೆ. ಜಿಲ್ಲಾಧಿಕಾರಿ ಕಚೇರಿಗೆ ಇವರಿಂದ ಒಂದು ಶೋಭೆ. ತಮ್ಮ ಶುಭ್ರ ದಿರಿಸಿನ ಮೂಲಕ ಕಚೇರಿಗೆ ವಿಶೇಷ ಕಳೆ ನೀಡುವ ಇವರಿಂದಲೇ ಜಿಲ್ಲಾಧಿಕಾರಿಗೆ ವಿಶೇಷ ಮರ್ಯಾದೆ ಎಂದು ಜಿಲ್ಲಾಧಿಕಾರಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಎಷ್ಟು ಸುಲಭದ ಕೆಲಸವಪ್ಪ, ಪ್ರತಿದಿನ ಬೆಳಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಡ್ರೆಸ್ ಮಾಡಿ ಸಜ್ಜಾಗಿ ನಿಲ್ಲುವ ಇವರ ಕೆಲಸ ನೋಡುಗರಿಗೆ ಬಹು ಸರಳ ಎನಿಸಬಹುದು; ಆದರೆ ಅವರ ಕರ್ತವ್ಯದ ಒತ್ತಡದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಅವರ ಅನುಭವ ತಿಳಿದು ಕೊಳ್ಳಬೇಕೆಂಬುದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಸಮಾರಂಭದಲ್ಲಿ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಕಳೆದ 23 ವರ್ಷ ಎಲ್ಲರೊಂದಿಗೆ ಬೆರೆತು ಕೆಲಸ ನಿರ್ವಹಿಸಿದೆ. 20 ಜಿಲ್ಲಾಧಿಕಾರಿಗಳ ಕೈಕೆಳಗೆ ಅವರ ಮನಸ್ಸನ್ನರಿತು ಅವರೊಂದಿಗೆ ಹಾಗೂ ಅವರನ್ನು ಭೇಟಿ ಮಾಡಲು ಬರುವವರ ಜೊತೆ ತಾಳ್ಮೆ, ನಯ ವಿನಯದಿಂದ ವರ್ತಿಸಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂಬುದು ಸುಧಾಮರ ಅನಿಸಿಕೆ. ಕಚೇರಿಯ ಹಲವು ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಸುಧಾಮರಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸುಧಾಮರ ಸರ್ಕಾರಿ ಸೇವೆ: ಕಳೆದ ಮೂರು ದಶಕ ಗಳಿಂದ ಸರ್ಕಾರಿ ಕಚೇರಿ ಸಿಬಂದಿಯಾಗಿ ಕೆಲಸ ಮಾಡಿದ ಸುಧಾಮ ರದ್ದು, ಅಪರೂಪದ ವ್ಯಕ್ತಿತ್ವ,ಸರಳ, ಸಜ್ಜನಿಕೆಯ ಮಾತುಗಳಿಂದ ಜಿಲ್ಲಾಧಿ ಕಾರಿಯ ವರನ್ನು ಕಾಣಲು ಬರುವವರನ್ನು ಆತ್ಮೀಯ ತೆಯಿಂದ ಮಾತನಾ ಡಿಸುತ್ತಿದ್ದರು.ಬಂಟ್ವಾಳ ತಾಲೂಕಿನ ವಿಟ್ಲ ಪುಟ್ಟ ಊರು ಪುಣಚದಲ್ಲಿ ಹುಟ್ಟಿದ ಸುಧಾಮರು, 1976 ರಲ್ಲಿ ಜವಾನರಾಗಿ ಸರ್ಕಾರಿ ಸೇವೆಗೆ ಪಾದಾರ್ಪಣೆ ಮಾಡಿದರು. 1987 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಜಮೇದಾರರನ್ನಾಗಿ ಸೇವೆ ಆರಂಭಿಸಿದರು.ತನ್ನ ಮೋದಲ ಜಿಲ್ಲಾಧಿಕಾರಿ ಬಿ.ಎಸ್. ಪಾಟೀಲ್ ಅವರಿಂದ ಇಂದಿನ ಪೊನ್ನುರಾಜ್ ವರೆಗೆ 20 ಜಿಲ್ಲಾಧಿಕಾರಿಗಳ ಜೊತೆ ಕೆಲಸ ಮಾಡಿದ ಅನುಭವ.ಬಹುಷ ಇದು ಒಂದು ದಾಖಲೆಯಾಗಿ ಉಳಿಯಲಿದೆ. ಅವರ 34 ವರ್ಷಗಳ ಸೇವೆಯಲ್ಲಿ ರಜೆ ತೆಗೆದುಕೊಂಡದ್ದು ಕೂಡ ಬಹಳ ವಿರಳ.ಸರಳ,ಸಜ್ಜನಿಕೆಯ ಸುಧಾಮರು ಇದೀಗ ನಿವೃತ್ತಿ ಹೊಂದಿದ್ದಾರೆ.ಮುಂದಿನ ನಿವೃತ್ತಿ ದಿನಗಳನ್ನು ಕೃಷಿ ಮಾಡಿ ಸವೆಸಬೇಕೆಂಬ ಆಶೆ ಅವರದ್ದು,ತನ್ನ ವಿಶ್ರಾಂತಿಯ ದಿನಗಳನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯಿಂದ ಕಳೆಯಲಿ ಎಂಬುದು ನಮ್ಮೆಲ್ಲರ ಆಶೆ ಮತ್ತು ಶುಭ ಹಾರೈಕೆ ಕೂಡ.