Tuesday, August 3, 2010

15 ದಿನಗಳೊಳಗೆ ಬಂದರು ಭೂಮಿ ಅತಿಕ್ರಮ ತೆರವಿಗೆ ಸಚಿವ ಪಾಲೆಮಾರ್ ಸೂಚನೆ

ಮಂಗಳೂರು,ಆಗಸ್ಟ್ 03:ಬಂದರು ಭೂ ಪ್ರದೇಶವನ್ನು ಅತಿಕ್ರಮ ನಡೆಸಿದವರನ್ನು 15 ದಿನಗಳೊಳಗೆ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಸಚಿವರಾಗಿರುವ ಜೆ. ಕೃಷ್ಣ ಪಾಲೆಮಾರ್ ಅವರು ಬಂದರು ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.
ನಗರದ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಇಲಾಖೆ ಕಾರ್ಯ ವೈಖರಿಯನ್ನು ತಪಾಸಿಸಿ, ಅಧಿಕಾರಿ ಗಳು ತಮ್ಮ ಕರ್ತವ್ಯ ವ್ಯಾಪ್ತಿಗಳನ್ನು ಅರಿತು ಜನರಿಗೆ ಉಪಕಾರ ವಾಗುವಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ಬಂದರು ಪ್ರದೇಶದಲ್ಲಿ ಈ ಸಂಬಂಧ ಚಟುವಟಿಕೆ ಗಳನ್ನು ಪ್ರೋತ್ಸಾಹಿಸಲು ಮಾತ್ರ ಅವಕಾಶವಿದ್ದು ಬೇರೆ ಉದ್ದೇಶಕ್ಕೆ ಭೂಮಿ ನೀಡ ಬಾರದೆಂದು ಹೇಳಿದರು.ಕಚೇರಿಯ ಅಸಮರ್ಪಕ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಸೂಚಿಸಿದ ಸಚಿವರು, ಜನರು ಪ್ರತಿಯೊಂದು ಕೆಲಸಕ್ಕೂ ಸಚಿವರನ್ನು ಭೇಟಿಯಾಗು ವಂತಹುದು ಬೇಸರ ತರಿಸುತ್ತದೆ; ಅಧಿಕಾರಿಗಳು ದಕ್ಷತೆಯಿಂದ ಕರ್ತವ್ಯ ನಿರ್ವಹಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು. ಹಳೇ ಬಂದರು ಒಟ್ಟು 516.80 ಎಕರೆ ಭೂಮಿ ಹೊಂದಿದೆ. ಬಂದರಿನಲ್ಲಿ 24 ಬಂದರು ಬಳಕೆದಾರರಿಗೆ ವಿವಿಧ ಉದ್ದೇಶಗಳಿಗಾಗಿ 3,25,398ಚ.ಮೀ ಬಂದರು ಜಾಗವನ್ನು ದೀರ್ಘಾವಧಿ ಗುತ್ತಿಗೆ ಮೇಲೆ ನೀಡಲಾಗಿದೆ.
ಹೆಚ್ಚಿನ ಬಂದರು ಜಾಗವನ್ನು ವಿವಿಧ ಉದ್ದೇಶ ಗಳಿಗೆ ವಾರ ಬಾಡಿಗೆ, ಮಾಸಿಕ ಬಾಡಿಗೆ ಮತ್ತು ವಾರ್ಷಿಕ ಬಾಡಿಗೆ ನೆಲೆಯಲ್ಲಿ ನೀಡಲಾಗಿದ್ದು, ಪ್ರಸ್ತುತ ಒಟ್ಟು 750 ವ್ಯಕ್ತಿಗಳಿಗೆ ನೀಡಲಾಗಿದೆ ಹಾಗೂ ನಿಯಮಗಳಡಿ ಶುಲ್ಕ ವಸೂಲಿ ಮಾಡಲಾ ಗುತ್ತಿದೆ ಎಂದು ಬಂದರು ಅಧಿಕಾರಿ ಕ್ಯಾಪ್ಟನ್ ಮೋಹನ್ ಕುದ್ರಿ ವಿವರಿಸಿದರು.2009-10 ರಲ್ಲಿ ಬಂದರು ಮೂಲಕ ಸರಕು ನಿರ್ವಹಣೆ ಮತ್ತು ನಾವೆಗಳ ಆಗಮನ ದಿಂದ ಒಟ್ಟು 44,78,671 ರೂ. ಗಳಿಸ ಲಾಗಿದೆ ಎಂದರು. ಅನಧಿಕೃತ ಮತ್ತು ಅಕ್ರಮಗಳ ಬಗ್ಗೆ ಸ್ಥಳೀಯರಿಂದ ಬಂದ ದೂರುಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸಚಿವರು ಅಧಿಕಾರಿಗೆ ಸೂಚಿಸಿದರು. ಹಳೆ ಬಂದರು ಪ್ರದೇಶವನ್ನು ವೀಕ್ಷಿಸಿದ ಸಚಿವರು ಹೂಳೆತ್ತುವ ಕಾಮಗಾರಿ, ಬಂದರು ಅಭಿವೃದ್ಧಿಗೆ, ಮೀನು ಗಾರಿಕೆಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಆದ್ಯತೆ ಯನ್ನು ನೀಡಲಾಗಿದೆ ಎಂದರು. ಬಂದರು ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮಕೈಗೊಳ್ಳಿ ಎಂದ ಸಚಿವರು, ಈಗಾಗಲೇ 9.66 ಕೋಟಿ ರೂ. ವೆಚ್ಚದ ಒಟ್ಟು 150 ಮೀಟರ್ ಉದ್ದದ ವಾಣಿಜ್ಯ ವಾರ್ಫ್(ಜೆಟ್ಟಿ) ನಿರ್ಮಾಣದ ಕಾಮಾಗಾರಿ ಪ್ರಗತಿಯಲ್ಲಿದ್ದು,64 ಮೀಟರುಗಳ ಕಾಮಾಗಾರಿ ಪೂರ್ಣಗೊಂಡಿದೆ.ಇದಕ್ಕೆ ಪ್ರಸಕ್ತ ಸಾಲಿನಲ್ಲಿ 1.73 ಕೋಟಿ ಬಿಡುಗಡೆ ಯಾಗಿದೆ. ಉಳಿದ 86 ಮೀಟರ್ ಕಾಮಾಗಾರಿಗೆ ಬೇಕಾದ ಹಣವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ತಕ್ಷಣ ಸೌಲಭ್ಯಗಳನ್ನು ನೀಡಿರುವುದಕ್ಕೆ ಅಳಿವೆ ಬಾಗಿಲಿನಲ್ಲಿ ಮುಳುಗಿದ ಬೋಟನ್ನು 24 ಲಕ್ಷ ರೂ. ವೆಚ್ಚ ಮಾಡಿ ತೆಗೆಸಿರುವುದೇ ಸಾಕ್ಷಿ ಎಂದರು. ತಾತ್ಕಾಲಿಕ ಹೂಳೆತ್ತುವಿಕೆಗ ಹಣ ಬಿಡುಗಡೆ ಮಾಡಲಾಗಿದ್ದು, ಶಾಶ್ವತ ಹೂಳೆತ್ತುವಿಕೆಗೆ ಯೋಜನೆ ರೂಪಿಸಲಾಗುವುದು. ಅತ್ಯಗತ್ಯವೆಂದು ಕಂಡರೆ ಡ್ರೆಜ್ಜಿಂಗ್ ಮೆಷಿನ್ ನ್ನು ಖರೀದಿಸುವ ಪ್ರಸ್ತಾಪವು ತಮ್ಮ ಮುಂದಿದೆ ಎಂದರು. ಬಂದರು ಅಧಿಕಾರಿಗಳು, ಸಿಬ್ಬಂದಿಗಳಿದ್ದರು.